Advertisement
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಪಂ 8ನೇ ಸಾಮಾನ್ಯ ಸಭೆ ಬೆಳಗ್ಗೆಯಿಂದ ಸಂಜೆ ಸುಮಾರು 8 ಗಂಟೆವರೆಗೂ ನಡೆಯಿತು. ಸದಸ್ಯರಾದ ಗಂಗಣ್ಣ ಸಾಹುಕಾರ, ಮಹಾಂತೇಶ ಪಾಟೀಲ ಅತ್ತನೂರು ಮಾತನಾಡಿ, ಅನುದಾನ ಹಂಚಿಕೆಯಲ್ಲಿ ಅಧ್ಯಕ್ಷರು ತಾರತಮ್ಯ ಎಸಗಿದ್ದು, ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ದೂರಿದರು.
Related Articles
Advertisement
ಜಿಪಂ ಸದಸ್ಯ ಶರಬಣ್ಣ ಸಾಹುಕಾರ ಮಾತನಾಡಿ, ಈ ಸಭೆಗೆ ಯೋಜನಾ ನಿರ್ದೇಶಕ ಶರಣಬಸವ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಉದ್ಯೋಗ ಖಾತಿಯಡಿ ಪ್ರತಿ ಗ್ರಾಪಂಗೆ 5 ಸಾವಿರ ಸಸಿ ಹಾಕಲು ಅವಕಾಶವಿದೆ. ಜಿಲ್ಲೆಯ 183 ಗ್ರಾಪಂಗಳಲ್ಲಿ 11 ಸಾವಿರ ಮಾತ್ರ ಹಾಕಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು 1.30 ಕೋಟಿ ಹಣವನ್ನು ತಮ್ಮ ಮಗನ ಖಾತೆಗೆ ಹಾಕಿ ಅಕ್ರಮ ಎಸಗಿದ್ದಾರೆ. ಆದರೆ, ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ. ಅವರು ಹಣ ಲೂಟಿ ಮಾಡಿರುವುದು ರಾಯಚೂರು ಜಿಲ್ಲಾ ಪಂಚಾಯಿತಿ ಅನುದಾನವಾಗಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಈ ಹಿಂದೆ ಒಬ್ಬ ಶಿಕ್ಷಕರು ಅವ್ಯವಹಾರ ಮಾಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಡಿಡಿಪಿಐ ಬಿ.ಕೆ.ನಂದನೂರು ಅವರಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ದೂರಿದರು.
ಇಷ್ಟೆಲ್ಲ ನಡೆದರೂ ಜಿಪಂ ಅಧ್ಯಕ್ಷರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಯಾವೊಬ್ಬ ಸದಸ್ಯರ ಕ್ಷೇತ್ರಗಳ ಸಮಸ್ಯೆ ಬಗೆಹರಿಸಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಜಿಪಂ ಸಿಇಒ ಲಕ್ಷ್ಮೀಕಾಂತರಡ್ಡಿ ಮಾತನಾಡಿ, ಈ ಸಾಮಾನ್ಯ ಸಭೆಯಲ್ಲಿ ಮಹಿಳಾ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲಾಗುವುದು. ತಮ್ಮ ಸಮಸ್ಯೆಗಳ ಕುರಿತು ಚರ್ಚೆ ನಡೆಸಬಹುದು ಎಂದು ಸಮಾಧಾನ ಮಾಡಲು ಮುಂದಾದರು.
ಕೊಪ್ಪರ ಕ್ಷೇತ್ರದ ಸದಸ್ಯೆ ಬಸಮ್ಮ ಲಿಂಗಣ್ಣ ದೊಡ್ಡಮನಿ ಮಾತನಾಡಿ, ಜಿಲ್ಲೆಯಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನದಿ ಪ್ರವಾಹದಿಂದ ನದಿ ಪಾತ್ರದ ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಹೊಲಗಳಲ್ಲಿನ ವಿದ್ಯುತ್ ಪರಿವರ್ತಕಗಳು, ಪಂಪ್‌ಸೆಟ್‌ಗಳು ಹಾಳಾಗಿವೆ. ದೇವದುರ್ಗ ತಾಲೂಕು ಒಂದರಲ್ಲೇ 550 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ. ಅವುಗಳನ್ನು ಕೂಡಲೇ ದುರಸ್ತಿ ಪಡಿಸಿ ಮತ್ತೆ ಅಳವಡಿಸಬೇಕು ಎಂದು ಆಗ್ರಹಿಸಿದರು. ಜೆಸ್ಕಾಂ ಅಧಿಕಾರಿ ಪ್ರತಿಕ್ರಿಯಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲೆಯಿಂದ ಸರ್ವೇ ಮಾಡಿ ವಿದ್ಯುತ್ ಪರಿವರ್ತಕಗಳನ್ನು ಹಾಕಲಾಗುವುದು ಎಂದು ತಿಳಿಸಿದರು. ಇದಕ್ಕೆ ಎಲ್ಲ ಸದಸ್ಯರು ಬೆಂಬಲ ಸೂಚಿಸುವ ಮೂಲಕ ಒಕ್ಕೊರಲ ಒತ್ತಾಯ ಮಾಡಿದರು.
ಸದಸ್ಯ ಕೇಶವರೆಡ್ಡಿ ಮಾತನಾಡಿ, ಒಂದೆಡೆ ಪ್ರವಾಹ ಮತ್ತೂಂದೆಡೆ ಬರದಿಂದ ಬೆಳೆಗಳೆಲ್ಲ ಹಾಳಾಗುತ್ತಿವೆ. ನದಿ ಪಾತ್ರದಲ್ಲಿರುವ ಜನರಿಗೆ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದಾಗ ಮಧ್ಯ ಪ್ರವೇಶಿಸಿದ ಸಿಇಒ ಲಕ್ಷ್ಮೀಕಾಂತ ರೆಡ್ಡಿ ಅವರು ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಅಗತ್ಯವಿರುವ ಕಡೆ ಈಗಾಗಲೇ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿಯಾದರೂ ಸಮಸ್ಯೆ ಇದ್ದಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸದಸ್ಯೆ ಶಿವಜ್ಯೋತಿ ಮಾತನಾಡಿ, ಮರ್ಚೆಡ್ ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ ಹಾಗೂ ಕ್ಷೇತ್ರದ ಅನೇಕ ಗ್ರಾಮಗಳ ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಶೌಚಗೃಹ ಸಮಸ್ಯೆಯಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಿಸುವಂತೆ ಸೂಚಿಸಿದರು.
ಸದಸ್ಯ ಶರವಣ್ಣ ಸಾಹುಕಾರ ಮಾತನಾಡಿ, ಚೆಕ್ ಡ್ಯಾಂ ನಿರ್ಮಾಣದ ಮಾಹಿತಿಗಾಗಿ ಕಳೆದ ಆರು ತಿಂಗಳಿಂದ ಕೇಳುತ್ತಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಜಿಪಂ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು ಮಾತನಾಡಿ, ಸದಸ್ಯರಾದ ಮೇಲೆ ನಮಗಿದ್ದ ಗೌರವ ಕೂಡ ಇಲ್ಲದಾಗುತ್ತಿದೆ. ಅಧ್ಯಕ್ಷರು ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕು. ಜಿಪಂ ಅಸ್ತಿತ್ವಕ್ಕೆ ಬಂದು ಮೂರು ವರ್ಷವಾದರೂ ಕೇವಲ 8 ಸಭೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸದಸ್ಯೆ ಕೆ.ಪದ್ಮಾವತಿ ಮಾತನಾಡಿ ಮಟಮಾರಿ, ಗಾಣಾಧಾಳ ಸೇರಿ ಸುಮಾರು ಐದು ಹಳ್ಳಿಗಳಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ನೀರಿನ ಸಮಸ್ಯೆ ನಿವಾರಿಸಬೇಕು. ನಿರ್ಮಿತಿ ಕೇಂದ್ರದಿಂದ 20 ಗ್ರಂಥಾಲಯ ನಿರ್ಮಿಸಲು ಅನುದಾನ ನೀಡಿ ಎರಡು ವರ್ಷವಾದರೂ ಕಾಮಗಾರಿ ಮುಗಿಸಿಲ್ಲ ಎಂದು ದೂರಿದರು. ನಿರ್ಮಿತಿ ಕೇಂದ್ರದ ಅಧಿಕಾರಿ ಮಾತನಾಡಿ, ಶಾಸಕರು ಅದರ ಉದ್ಘಾಟನೆಗೆ ಸಮಯ ನೀಡಿದ್ದು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸನಗೌಡ ಕಂಬಳಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಆಧ್ಯಕ್ಷ ಕಾಸಿಂ ನಾಯಕ, ಯೋಜನಾಧಿಕಾರಿ ಡಾ| ಟಿ.ರೋಣಿ, ಉಪ ಕಾರ್ಯದರ್ಶಿ ಮಹ್ಮದ್ ಯೂಸುಫ್, ಸಹಾಯಕ ಕಾರ್ಯದರ್ಶಿ ಜಯಲಕ್ಷ್ಮೀ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.