Advertisement

ತಣ್ಣಗಾದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕಗ್ಗಂಟು

02:44 PM Sep 15, 2018 | Team Udayavani |

ರಾಯಚೂರು: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೊದಲಿದ್ದ ತೀವ್ರತೆ ಕಳೆದುಕೊಂಡಿದ್ದು, ರಾಜಕೀಯ ಪಕ್ಷಗಳಲ್ಲೂ ವಿಶ್ರಾಂತಿಯ ವಾತಾವರಣ ಕಾಣಿಸುತ್ತಿದೆ. ಆರಂಭದಲ್ಲಿ ಬಿರುಸು ಪಡೆದಿದ್ದ ರಾಜಕೀಯ ಬೆಳವಣಿಗೆ ಸದ್ಯಕ್ಕೆ ಅಷ್ಟಾಗಿ ಕಂಡು ಬರುತ್ತಿಲ್ಲ.

Advertisement

ಜಿಲ್ಲೆಯ 175 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎಲ್ಲ ಕಡೆ ಅಧಿಕಾರ ಹಿಡಿಯುವ ಪಕ್ಷಗಳ ಲೆಕ್ಕಾಚಾರ ಜೋರಾಗಿತ್ತು. ರಾಯಚೂರು ನಗರಸಭೆಯಲ್ಲೂ 35 ಸ್ಥಾನಗಳಲ್ಲಿ ಬಿಜೆಪಿ 12 ಸ್ಥಾನ, ಕಾಂಗ್ರೆಸ್‌ 11, ಜೆಡಿಎಸ್‌ 3 ಮತ್ತು ಪಕ್ಷೇತರ 9 ಸ್ಥಾನ ಗೆಲವು ಸಾಧಿ ಸಿವೆ. ಆದರೆ, ಅತಿ ಹೆಚ್ಚು ಸ್ಥಾನ ಪಡೆದರೂ ಬಿಜೆಪಿಗೆ ಅಧಿಕಾರ ಸಿಗುವ ಸಾಧ್ಯತೆ ಕಡಿಮೆ ಇತ್ತು. ಚುನಾವಣೆ ಫಲಿತಾಂಶದ ಬೆನ್ನ ಹಿಂದೆಯೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ್ದರಿಂದ ಎಲ್ಲ ಪಕ್ಷಗಳಲ್ಲಿ ಚಟುವಟಿಕೆ ಚುರುಕು ಪಡೆದಿದ್ದವು.ಆದರೆ, ಮೀಸಲಾತಿಯಲ್ಲಿ ಉಂಟಾದ ಗೊಂದಲದಿಂದ ಆಕಾಂಕ್ಷಿಯೊಬ್ಬರು ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಈಗ ಎಲ್ಲವೂ ಸ್ಥಬ್ಧವಾಗಿದೆ.

ಪಕ್ಷೇತರರ ಡಿಮ್ಯಾಂಡ್‌: ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚಿರುವ ಕಾರಣ, ಅದರಲ್ಲೂ ಕಾಂಗ್ರೆಸ್‌ ಬೆಂಬಲಿತರೇ ಹೆಚ್ಚು ಗೆದ್ದಿರುವ ಕಾರಣ ಕೈಗೆ ಚುಕ್ಕಾಣಿ ಎಂದೇ ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್‌ನಲ್ಲಿ ಉಂಟಾದ ಬಣ ರಾಜಕೀಯದಿಂದ ಅದು ಬಿಕ್ಕಟ್ಟಾಗಿ ಪರಿಣಮಿಸಿದೆ. ಎಲ್ಲ ಕಾಂಗ್ರೆಸ್ಸಿಗರು, ಪಕ್ಷೇತರರು ಉಭಯ ಬಣದವರಾದ ಕಾರಣ ಭಿನ್ನ ಹಾದಿ ತುಳಿಯುತ್ತಿದ್ದಾರೆ. ಜತೆಗೆ ಅಧ್ಯಕ್ಷ ಪಟ್ಟದ ಮೇಲೆ ಉಭಯ ಬಣಗಳಿಗೆ ಕಣ್ಣಿರುವ ಕಾರಣ ಅದು ಸುಲಭಕ್ಕೆ ಸಾಧ್ಯವಿಲ್ಲ
ಎನ್ನುವಂತಾಗಿತ್ತು.

ಇನ್ನು ಬಿಜೆಪಿ 12 ಸದಸ್ಯರಿದ್ದು, ಇನ್ನೂ ಆರು ಜನರಿಗಾಗಿ ಪಕ್ಷೇತರರನ್ನು ಎಡತಾಕದೆ ವಿಧಿ ಇರಲಿಲ್ಲ. ನಗರ ಶಾಸಕ ಶಿವರಾಜ ಪಾಟೀಲ ಕೂಡ ಇನ್ನಿಲ್ಲದ ಕಸರತ್ತು ನಡೆಸಿದ್ದು, ಅಧಿಕಾರ ಹಿಡಿಯಲು ಸಾಕಷ್ಟು ಹವಣಿಸುತ್ತಿದ್ದಾರೆ. ಮಾಹಿತಿ ಪ್ರಕಾರ ಪಕ್ಷೇತರರರೆಲ್ಲ ಒಟ್ಟಾಗಿ ಬಂದಲ್ಲಿ ಅಧ್ಯಕ್ಷ ಸ್ಥಾನವನ್ನೂ ಬಿಟ್ಟು ಕೊಡಲು ಬಿಜೆಪಿ ಸಿದ್ಧವಾಗಿದೆ. ಹೀಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷೇತರರಿಗೆ ಇನ್ನಿಲ್ಲದ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಕೈಗೆ ಬಣ ರಾಜಕೀಯ ಸಂಕಷ್ಟ: ಕಾಂಗ್ರೆಸ್‌ ಕಡಿಮೆ ಸ್ಥಾನಕ್ಕಿಳಿಯಲು ಪಕ್ಷದೊಳಗಿನ ಬಣ ರಾಜಕೀಯವೂ ಕಾರಣ. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌ .ಬೋಸರಾಜ್‌ ಮತ್ತು ಮಾಜಿ ಶಾಸಕ ಸೈಯ್ಯದ್‌ ಯಾಸಿನ್‌ ನಡುವಿನ ರಾಜಕೀಯ ಜಿದ್ದಾಜಿದ್ದಿ ಪಕ್ಷದ ಗೆಲುವಿಗೆ ಬ್ರೇಕ್‌ ಹಾಕಿದೆ. ಹೀಗಾಗಿ ಕಾಂಗ್ರೆಸ್‌ 11 ಗೆದ್ದರೂ ಉಭಯ ಬಣಗಳ ಬೆಂಬಲಿತ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿಸಿದು ಪರಸ್ಪರ ಪೈಪೋಟಿ ನೀಡಿದ್ದಾರೆ. ಈ ಬಣ ರಾಜಕೀಯದ ಲಾಭವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ವಿಫಲವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ಈಗ ಅಧ್ಯಕ್ಷರ ಆಯ್ಕೆಗೆ ಕಾಲಾವಕಾಶ ಸಿಕ್ಕಿರುವ ಕಾರಣ ರಾಜಕೀಯ ಬೆಳವಣಿಗೆಗೆ ಆಸ್ಪದ ನೀಡಿದಂತಾಗಿದ್ದು, ಎಲ್ಲ ಪಕ್ಷಗಳು ತಮ್ಮೊಳಗೆ ತಂತ್ರಗಾರಿಕೆ ನಡೆಸಿವೆ. ಪಕ್ಷೇತರರನ್ನು ತಮ್ಮತ್ತ ಸೆಳೆಯುವ ಯೋಜನೆ ರೂಪಿಸುತ್ತಿವೆ.
 
ನೆಲಕಚ್ಚಿದ ಜೆಡಿಎಸ್‌: ರಾಜ್ಯದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇದ್ದಾಗ್ಯೂ ನಗರಸಭೆಯಲ್ಲಿ ಕೇವಲ ಮೂರು ಸ್ಥಾನ ಪಡೆಯುವ ಮೂಲಕ ಜೆಡಿಎಸ್‌ ತೀವ್ರ ಮುಖಭಂಗ ಎದುರಿಸಿದೆ. ಅಲ್ಲದೇ, ಬೇರೆ ಕಡೆಯೂ ಅಧಿಕಾರ ಹಿಡಿಯುವಷ್ಟು ಶಕ್ತವಾಗಿಲ್ಲ. ಜೆಡಿಎಸ್‌ ಮುಖಂಡರೇ ಪಕ್ಷದ ನಾಯಕರಲ್ಲಿರುವ ಪರಸ್ಪರ ಅಸಹಕಾರದಿಂದ ಸೋತಿದ್ದಾಗಿ ಒಪ್ಪಿಕೊಂಡಿದ್ದಾರೆ. ಆ ಮೂಲಕ ಅಧಿಕಾರಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತೆ ದೂರ ಉಳಿಯುತ್ತಿದ್ದಾರೆ.

Advertisement

ಈಗ ಪಕ್ಷೇತರರು ಅಂತಿಮ ಎಂಬುದು ಉಭಯ ಪಕ್ಷಗಳಿಗೂ ಮನವರಿಕೆ ಆಗಿದೆ. ಹೀಗಾಗಿ ಮನವೊಲಿಕೆಗೆ ಸಿಕ್ಕ ಕಾಲಾವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೋ ನೋಡಬೇಕು. ಕಾಂಗ್ರೆಸ್‌ನ ಉಭಯ ಬಣಗಳು ಭಿನ್ನ ಹಾದಿ ತುಳಿದು ಬಿಜೆಪಿ ಜತೆ ಕೈ ಜೋಡಿಸಲಿವೆಯಾ ಎನ್ನುವ ಗುಮಾನಿಯೂ ಇದೆ. ಒಟ್ಟಿನಲ್ಲಿ ಪಕ್ಷೇತರ ಸದಸ್ಯರು ಕೈ ಹಿಡಿಯುವರೋ ಕಮಲ ಮುಡಿಯುವರೋ ಎಂಬುದು ಸದ್ಯದ ಜಿಜ್ಞಾಸೆ. 

Advertisement

Udayavani is now on Telegram. Click here to join our channel and stay updated with the latest news.

Next