Advertisement

Arrested: ತಂಗಿ ಮದುವೆಗೆ ಮಾಡಿದ್ದ ಸಾಲ ತೀರಿಸಲು ಸರ ಕಳ್ಳತನ; ಬಂಧನ

10:50 AM Jul 18, 2024 | Team Udayavani |

ಬೆಂಗಳೂರು: ಸಹೋದರಿ ಮದುವೆಗೆ ಮಾಡಿ ಕೊಂಡಿದ್ದ ಸಾಲ ತೀರಿಸಲು ಸರ ಕಳ್ಳತನ ಮಾಡುತ್ತಿದ್ದ ಫ‌ುಡ್‌ ಡೆಲಿವರಿ ಬಾಯ್‌ನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೋಡಿಪಾಳ್ಯ ನಿವಾಸಿ ಸಂಜೀವ್‌ ಕುಮಾರ್‌ (32) ಬಂಧಿತ ಆರೋಪಿ. ಈತನಿಂದ 7 ಲಕ್ಷ ರೂ. ಮೌಲ್ಯದ 105 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಮದ್ದೂರಿನ ಕೆ.ಎಂ.ದೊಡ್ಡಿ ಮೂಲದ ಸಂಜೀವ್‌ ಕುಮಾರ್‌, ಕೆಲ ವರ್ಷಗಳಿಂದ ಬೆಂಗಳೂರಿನ ಕೋಡಿಪಾಳ್ಯದಲ್ಲಿ ಪತ್ನಿ ಜತೆ ವಾಸವಾಗಿದ್ದಾನೆ. ಝೋಮ್ಯಾಟೋದಲ್ಲಿ ಫ‌ುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ಒಂದೂವರೆ ವರ್ಷಗಳ ಹಿಂದೆ 5 ಲಕ್ಷ ರೂ. ಸಾಲ ಪಡೆದು ಸಹೋದರಿಯ ಮದುವೆ ಮಾಡಿದ್ದ. ಆದರೆ, ನಿಗದಿತ ಸಮಯದಲ್ಲಿ ಸಾಲ ತೀರಿಸಲಾಗದೆ, ಸಾಲಗಾರರ ಒತ್ತಡ ಹೆಚ್ಚಾಗಿದೆ. ಜತೆಗೆ ಮನೆ ನಿರ್ವಹಣೆಯೂ ಕಷ್ಟವಾಗಿತ್ತು. ಹೀಗಾಗಿ ಫ‌ುಡ್‌ ಡೆಲಿವರಿ ಜತೆಗೆ ಸರಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಕೋಡಿಪಾಳ್ಯ ಕ್ರಾಸ್‌ನಲ್ಲಿ ಮಹಿಳೆಯೊಬ್ಬರು ಮಗಳನ್ನು ಶಾಲಾ ಬಸ್‌ಗೆ ಹತ್ತಿಸಿ ವಾಪಸ್‌ ಹೋಗುವಾಗ, ಎದುರಿನಿಂದ ಬೈಕ್‌ನಲ್ಲಿ ಹೋದ ಆರೋಪಿ, ಆಕೆಯ ಸರ ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ಬಂಧನದಿಂದ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ 4 ಸರ ಕಳವು, ಆರ್‌.ಆರ್‌.ನಗರ ಮತ್ತು ಕುಂಬಳಗೋಡು ಠಾಣೆಯಲ್ಲಿ ದಾಖಲಾಗಿದ್ದ 3 ಸರ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಫ‌ುಡ್‌ ಡೆಲಿವರಿ ವೇಳೆ ಜಾಗ ಗುರುತಿಸಿ ಕೃತ್ಯ!:

Advertisement

ಆರೋಪಿ ಸಂಜೀವ್‌ ಕುಮಾರ್‌ ಸರ ಕಳ್ಳತನ ಮಾಡುವಾಗ ಫ‌ುಡ್‌ ಡೆಲಿವರಿಗೆ ಬಳಸುತ್ತಿದ್ದ ಬ್ಯಾಗ್‌ ಬಳಸುತ್ತಿರಲಿಲ್ಲ ಎಂಬುದು ಗೊತ್ತಾಗಿದೆ.  ಫ‌ುಡ್‌ ಡೆಲಿವರಿ ಮಾಡುವಾಗ ಯಾವ ಪ್ರದೇಶದಲ್ಲಿ ಮಹಿಳೆಯರು ಯಾವ ಸಮಯದಲ್ಲಿ ಓಡಾಡುತ್ತಾರೆ. ಈ ವೇಳೆ ಹೆಚ್ಚು ಜನ ಸಂದಣಿ ಇರುತ್ತದೆಯೇ? ಇಲ್ಲವೇ? ಎಂಬುದನ್ನು ಅರಿತು ಮರು ದಿನ ಅದೇ ಪ್ರದೇಶಕ್ಕೆ ಬಂದು ಸರ ಕಳವು ಮಾಡಿ ಪರಾರಿಯಾಗುತ್ತಿದ್ದ. ಈ ಹಿಂದೆ ಕಳವು ಮಾಡಿದ್ದ ಸರಗಳನ್ನು ಅಡಮಾನ ಇಟ್ಟು, ಒಂದಷ್ಟು ಸಾಲ ತೀರಿಸಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next