ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಲು ಆನ್‌ಲೈನ್ ಆ್ಯಪ್‌ಗಳ ಮೂಲಕ ಮಾಡಿಕೊಂಡಿದ್ದ ಸಾಲ ತೀರಿಸಲು ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಸರಗಳ್ಳತನಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಮಲ್ಲೇಶ್ವರ ನಿವಾಸಿಗಳಾದ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ನಂದಿನಿಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಸಾವಿರಾರು ರೂ. ಹೂಡಿಕೆ ಮಾಡಿದ್ದಾರೆ. ಅದರಿಂದ ತುಂಬ ನಷ್ಟ ಹೊಂದಿದ್ದಾಗ ಆನ್‌ಲೈನ್ ಆ್ಯಪ್‌ನಲ್ಲಿ ಸಾಲ ಪಡೆದುಕೊಂಡಿದ್ದಾರೆ. ಕಂಪನಿಯವರು ಪದೇ ಪದೇ ಕರೆ ಮಾಡಿ ಸಾಲ ತೀರಿಸುವಂತೆ ಪೀಡಿಸುತ್ತಿದ್ದರು. ಅದನ್ನು ತೀರಿಸಲು ಅನ್ಯ ಮಾರ್ಗ ತಿಳಿಯದೆ ಸರಗಳ್ಳತನಕ್ಕೆ ಇಳಿದಿದ್ದರು ಎಂದು ಪೊಲೀಸರು ಹೇಳಿದರು.
ವೃದ್ಧೆ ಸರ ಕಳವುವಿಗೆ ಯತ್ನ :
ನಂದಿನಿಲೇಔಟ್‌ನ ಬಿಎಚ್‌ಇಎಲ್ ಲೇಔಟ್‌ನಲ್ಲಿರುವ ಪಾರ್ಕ್ ಬಳಿ ವೃದ್ಧೆಯೊಬ್ಬರು ವಾಯುವಿಹಾರಕ್ಕೆ ಹೋಗುತ್ತಿದ್ದರು. ಆಗ ಅದೇ ವೇಳೆ ವಿದ್ಯಾರ್ಥಿನಿ ಸ್ನೇಹಿತ ಬೈಕ್‌ನಲ್ಲಿ ಸ್ವಲ್ಪ ದೂರದಲ್ಲಿ ಕಾಯುತ್ತಿದ್ದ. ವಿದ್ಯಾರ್ಥಿನಿ ಕೈಯಲ್ಲಿ ಖಾರದ ಪುಡಿ ಹಿಡಿದು ವೃದ್ಧೆಯ ಮೇಲೆ ಎರಚಿ ಸರ ಕಳವು ಮಾಡಲು ಯತ್ನಿಸಿದ್ದಾಳೆ. ಆದರೆ, ವಿಫಲಗೊಂಡಿದ್ದಾಳೆ. ವೃದ್ಧೆ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಇಬ್ಬರು ಬೈಕ್‌ನಲ್ಲಿ ಪರಾರಿಯಾಗಿದ್ದರು. ಘಟನೆ ಬಳಿಕ ವೃದ್ಧೆ ನೀಡಿದ ದೂರಿನ ಮೇರೆಗೆ ಸ್ಥಳೀಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ. ಎಂದು ಪೊಲೀಸರು ಹೇಳಿದರು. ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.