ಬೆಂಗಳೂರು: ಮಹಿಳೆಯೊಬ್ಬರ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದ ಭಾವ- ಭಾಮೈದನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಏಕಲವ್ಯನಗರದ ಕಬ್ಬಾಳು ಅಲಿ ಯಾಸ್ ಚಂದು(27) ಮತ್ತು ರಘು ಅಲಿಯಾಸ್ ರವಿ(37) ಬಂಧಿತರು. ಆರೋಪಿಗಳಿಂದ 6 ಲಕ್ಷ ರೂ. ಮೌಲ್ಯದ 111 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ.
ಫೆ.7ರಂದು ಬೆಳಗ್ಗೆ 8.45ರ ಸುಮಾರಿಗೆ ಡಾ| ಎ.ಆದಿಲಕ್ಷ್ಮೀ ಎಂಬುವರು ಸನ್‌ಸಿಟಿಯ ವಾಟರ್ ಟ್ಯಾಂಕ್ ಹತ್ತಿರವಿರುವ ಪಾರಿಜಾತ ಮರದಲ್ಲಿ ಹೂ ಕಿತ್ತುಕೊಳ್ಳುತ್ತಿದ್ದರು. ಆಗ ಆರೋಪಿಯೊಬ್ಬ ಬಂದು ಯಾವ ದೇವರಿಗೆ ಹೂ ಎಂದಿದ್ದಾನೆ. ಆದಿಲಕ್ಷ್ಮೀ ಕೃಷ್ಣ ದೇವರಿಗೆ ಎಂದು ಪ್ರತಿಕ್ರಿಯಿಸಿದ್ದಾರೆ. ನಂತರ ನಡೆದುಕೊಂಡು ಹೋಗುವಾಗ ತನ್ನ ಸ್ನೇಹಿತನ ಜತೆ ಬೈಕ್‌ನಲ್ಲಿ ಹಿಂಬಾಲಿಸಿದ ಆರೋಪಿಗಳು ಸರ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
ಸಹೋದರ ಬಿಡಿಸಲು, ಭಾವನ ಜತೆ ಸೇರಿ ಸರ ಕಳವು: ಕಬ್ಬಾಳು ಮತ್ತು ಆತನ ಸಹೋದರ ಕಳ್ಳರಾಗಿದ್ದಾರೆ. 2022ರ ನವೆಂಬರ್‌ನಲ್ಲಿ ಕಬ್ಬಾಳು ಸಹೋದರ ದೇವಸ್ಥಾನ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ. ಮತ್ತೂಂದೆಡೆ ಸರ ಕಳವು ಪ್ರಕರಣದಲ್ಲಿ ಕಬ್ಬಾಳು ಜೈಲು ಸೇರಿದ್ದ. ಈ ವೇಳೆ ಜೈಲಿ ನಲ್ಲಿದ್ದ ಮಂಜ ಅಲಿಯಾಸ್ ಕಳ್ಳ ಮಂಜನ ಪರಿಚಯವಾಗಿದೆ. ತನ್ನ ಸಹೋದರನನ್ನು ಜೈಲಿನಿಂದ ಬಿಡಿಸಲು ಹಣದ ಅಗತ್ಯದ ಬಗ್ಗೆ ಚರ್ಚಿಸಿದ್ದಾನೆ. ಆಗ ಮಂಜ ಸರ ಕಳವು ಮಾಡಲು ಯೋಜನೆ ರೂಪಿಸಿದ್ದು,. ಇಬ್ಬರು ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಕಳವು ಮಾಡಿದ್ದರು. ಬಳಿಕ ಮಂಜ ನಾಪತ್ತೆಯಾಗಿದ್ದು, ಕಬ್ಬಾಳು ಬೆಂಗಳೂರಿಗೆ ಬಂದಿದ್ದ. ಇದೇ ವೇಳೆ ತುಮಕೂರು ಜೈಲಿನಿಂದ ಕಳವು ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಸಹೋದರಿಯ ಪತಿ (ಭಾವ) ರಘು ಅಲಿಯಾಸ್ ರವಿನನ್ನು ಕಬ್ಬಾಳ ಭೇಟಿಯಾಗಿ ಇಬ್ಬರು ಒಂದೇ ದಿನ ಮೂರು ಕಡೆ ಸರ ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.