ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಕ್ಲಬ್ ಕ್ಲಾಸ್ ಬಸ್‌ಗಳಲ್ಲಿ ಪ್ರಯಾಣಿಸಿ ಸಹ ಪ್ರಯಾಣಿಕರ ಬ್ಯಾಗ್‌ಗಳಲ್ಲಿದ್ದ ಚಿನ್ನಾಭರಣ, ನಗದು ದೋಚುತ್ತಿದ್ದ ಕಳ್ಳತನನ್ನು ಕೆಎಸ್ ಆರ್‌ಟಿಸಿ ಬಸ್ ನಿರ್ವಾಹಕ ಅಶೋಕ್ ಜಾದವ್ ಎಂಬವರು ಪತ್ತೆ ಹಚ್ಚಿ ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜು. 10ರಂದು ಮಂಗಳೂರಿನ 2ನೇ ಘಟಕಕ್ಕೆ ಸೇರಿದ ಕ್ಲಬ್ ಕ್ಲಾಸ್ ವೋಲ್ವೋ ಬಸ್‌ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ ಉಪ್ಪಿನಂಗಡಿಯ ಗಡಿಯಾರದ ಬಳಿ ಮುಂಜಾನೆ 5 ಗಂಟೆ ಸುಮಾರಿಗೆ ಪ್ರಯಾಣಿಕನೊಬ್ಬ ಮೂತ್ರವಿಸರ್ಜನೆಗಾಗಿ ಬಸ್ ನಿಲ್ಲಿಸುವಂತೆ ಕೇಳಿ, ಕೆಳಗೆ ಇಳಿದ್ದಾನೆ. ಕೆಲಹೊತ್ತು ಕಳೆದರೂ ಆರೋಪಿ ವಾಪಸ್ ಬಂದಿಲ್ಲ. ನಂತರ ಆತನ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು.
ಅನುಮಾನಗೊಂಡ ಸಹ ಪ್ರಯಾಣಿಕರ ಬ್ಯಾಗ್ ಪರಿಶೀಲಿಸಿದಾಗ ಲಕ್ಷ್ಮೀ ಎಂಬುವರ ಬ್ಯಾಗ್‌ನಲ್ಲಿದ್ದ ಎರಡೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು. ಕೂಡಲೇ ಅಶೋಕ್ ಜಾದವ್, ಘಟಕದ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ನೀಡಿ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಬೆಂಗಳೂರಿನಲ್ಲೂ ದೂರು ನೀಡಿದ್ದರು.
ಈ ಮಧ್ಯೆ ನ.12ರಂದು ಆರೋಪಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅದೇ ಬಸ್‌ನಲ್ಲಿ ಪ್ರಯಾಣಿಸಲು ಬಂದಿದ್ದು, ಏಕಾಏಕಿ ಸೀಟ್‌ನಲ್ಲಿ ಕುಳಿತಿದ್ದರು. ಅದರಿಂದ ಅನು ಮಾನಗೊಂಡ ಅಶೋಕ್ ಜಾದವ್, ಕೂಡಲೇ ಘಟಕದ ನಿಯಂತ್ರಣಾಧಿಕಾರಿಗೆ ಮಾಹಿತಿ ನೀಡಿ, ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ತವ್ಯ ಪ್ರಜ್ಞೆ ಮೆರೆದ ಬಸ್ ನಿರ್ವಾಹಕ ಅಶೋಕ್ ಜಾದವ್ ಕಾರ್ಯವನ್ನು ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಶ್ಲಾಘಿಸಿದ್ದಾರೆ.