ಬೆಂಗಳೂರು: ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿ ಚಿನ್ನದ ಸರ ಕಳವು ಮಾಡುತ್ತಿದ್ದ ಮೂವರು ಆರೋಪಿ ಗಳನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟೆ ನಿವಾಸಿ ಅಚ್ಯುತ್ ಕುಮಾರ್ ಅಲಿಯಾಸ್ ಗಣಿ(35), ಮೈಸೂರು ಮೂಲದ ಸಿದ್ದರಾಜು ಅಲಿಯಾಸ್ ಪ್ರಜ್ವಲ್ (21) ಹಾಗೂ ಬೆಂಗಳೂರಿನ ಕಮಲಾನಗರದ ಪ್ರಸನ್ನಕುಮಾರ್(35) ಬಂಧಿತರು.
ಆರೋಪಿ ಗಳಿಂದ 5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ದಾಸರಹಳ್ಳಿ ಭುವನೇಶ್ವರಿನಗರದಲ್ಲಿ ಸಂಜೆ ವಾಯು ವಿಹಾರಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಬೈಕ್ ನಲ್ಲಿ ಹಿಂಭಾಲಿಸಿ ಮಾಂಗಲ್ಯ ಸರ ಕಳವು ಮಾಡಿ ಪರಾರಿಯಾಗಿದ್ದರು. ಸರ ಕದಿಯುವು ದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ.
ಆರೋಪಿಗಳ ಪೈಕಿ ಅಚ್ಯುತ್ ಕುಮಾರ್ ವಿರುದ್ಧ ಈ ಹಿಂದೆ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಹೊಸಪೇಟೆ, ಹಾಸನ, ತುಮಕೂರು, ದೊಡ್ಡಬಳ್ಳಾಪುರ, ಬಳ್ಳಾರಿ, ಚನ್ನಪಟ್ಟಣ ಸೇರಿ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 155ಕ್ಕೂ ಅಧಿಕ ಸರಗಳವು ಪ್ರಕರಣ ದಾಖಲಾಗಿವೆ. 2018ನೇ ಸಾಲಿನಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ ಕಳವು ಮಾಡಿ ಜೈಲು ಸೇರಿದ್ದ. 4 ವರ್ಷ ಜೈಲಿನಲ್ಲಿದ್ದು ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದು ಹೊರಬಂದು, ಇದೀಗ ಮತ್ತೆ ಅದೇ ಕೃತ್ಯಗಳಲ್ಲಿ ತೊಡಗಿದ್ದನು ಎಂದು ಪೊಲೀಸರು ಹೇಳಿದರು.
ಆರೋಪಿ ಸಿದ್ದರಾಜು ರಾತ್ರಿ ವೇಳೆ ಬೀಗ ಹಾಕಿರುವ ಅಂಗಡಿಗಳನ್ನು ಗುರಿಯಾಗಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ. ಮತ್ತೂಬ್ಬ ಆರೋಪಿ ಪ್ರಸನ್ನ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಎಂದು ಪೊಲೀಸರು ಹೇಳಿದರು.
ಜೈಲಿನಲ್ಲಿ ಪರಿಚಯ, ಒಟ್ಟಿಗೆ ಕಳ್ಳತನ : ಮೂವರು ಆರೋಪಿಗಳು ಬೇರೆ ಬೇರೆ ಪ್ರಕರಣಗಳಲ್ಲಿ ಜೈಲು ಸೇರಿದ್ದಾಗ ಪರಸ್ಪರ ಪರಿಚಯವಾಗಿದ್ದಾರೆ. ಈ ವೇಳೆಯೇ ಸರಗಳವು ಮಾಡಿದರೆ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ಲೆಕ್ಕಾಚಾರ ಹಾಕಿ, ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಬಳಿಕ ಮೂವರು ಸೇರಿಕೊಂಡು ಸರಗಳವು ಮಾಡುತ್ತಿದ್ದರು. ಅದಕ್ಕಾಗಿ ತುಮಕೂರಿನಲ್ಲಿ ಪಲ್ಸರ್ ದ್ವಿಚಕ್ರ ವಾಹನ ಕಳವು ಮಾಡಿದ್ದರು. ಆ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿ ನಗರದ ಬಾಗಲಗುಂಟೆ, ವಿದ್ಯಾರಣ್ಯಪುರ, ನೆಲಮಂಗಲ ಟೌನ್, ನಂದಿನಿಲೇಔಟ್ ಠಾಣೆಯಲ್ಲಿ ಸರ ಕಳವು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.