ವಿಜಯಪುರ : ಶನಿವಾರ ರಾತ್ರಿ ಎಂಎಸ್‍ಐಎಲ್ ಮದ್ಯದ ಅಂಗಡಿ ಮ್ಯಾನೇಜರ್ ನನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಿರುವ ಪೊಲೀಸರು, ಸ್ಥಳೀಯ ಮೂವರು ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಡಚಣ ಪಟ್ಟಣದಲ್ಲಿರುವ ಎಂಎಸ್‍ಐಎಲ್ ಮದ್ಯಮ ಅಂಗಡಿಯ ಮ್ಯಾನೇಜರ್ ಹಣಮಂತರೌಯ ಶರಣಪ್ಪ ಹತಗುಂದಿ ಅವರು ಶನಿವಾರ ರಾತ್ರಿ 10 ಗಂಟೆಗೆ ತಮ್ಮ ಅಂಗಡಿ ವ್ಯಾಪಾರ ಮುಗಿಸಿ, ದಿನದ ವಹಿವಾಟಿನ 1.20 ಲಕ್ಷ ರೂ. ನಗದು ಹಣದೊಂದಿಗೆ ಸ್ಕೂಟಿ ಮೇಲೆ ಮನೆಗೆ ಹೊರಟಿದ್ದರು.
ಈ ವೇಳೆ ಬೈಕ್ ಮೇಲೆ ಬಂದ ಮೂವರು ಆಗಂತುಕರು ಹಣಮಂತರಾಯ ಅವರನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಗಾಗಯೊಂಡು ಹಣಮಂತರಾಯ ಕೆಳಗೆ ಬೀಳುತ್ತಲೇ ಹಣದ ಸಮೇತ ದರೋಡೆಕೋರರು ಪರಾರಿಯಾಗಿದ್ದರು.
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಲೇ ಕಾರ್ಯಾಚರಣೆಗೆ ಇಳಿದ ಸಿಪಿಐ ಸುರೇಶ ಬೆಂಡೆಗುಂಬಳ, ಪಿಎಸ್‍ಐ ಆರ್.ಎಸ್.ಖೋತ್, ಎಎಸ್‍ಐ ಎಚ್.ಎಸ್.ಶಿವಪೂರ ಇವರಿದ್ದ ಪೊಲೀಸ ತಂಡ ಆರೋಪಿಗಳನ್ನುಯ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರನ್ನು ಚಡಚಣ ನಿವಾಸಿಗಳೇ ಆಗಿರುವ ಸಾಗರ ಶಿಂಧೆ (23), ಶಿವಾನಂದ ಕ್ಷತ್ರಿ (23) ಹಾಗೂ ಯಲ್ಲಪ್ಪ ಕ್ಷತ್ರಿ (27) ಎಮದು ಗುರುತಿಸಲಾಗಿದ್ದು, ಬಂಧಿತ ಆರೋಪಿಗಳಿಂದ ದರೋಡೆ ಮಾಡಿದ್ದ 1.12,500 ರೂ. ನಗದು, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು, ಪಲ್ಸರ್ ಬೈಕ್, ಮೊಬೈಲ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ದರೋಡೆಯಂಥ ಪ್ರಕರಣವನ್ನು ತ್ವರಿತವಾಗಿ ಪತ್ತೆಮಾಡುವಲ್ಲಿ ಯಶಸ್ವಿಯಾಗಿರುವ ಚಡಚಣ ಪೊಲೀಸರ ಕಾರ್ಯಕ್ಕೆ ಎಸ್ಪಿ ಋಷಿಕೇಶ ಭಗವಾನ್ ಶ್ಲಾಘಿಸಿ, ಅಭಿನಂದಿಸಿದ್ದಾರೆ.