ಚಡಚಣ: ಕೌಶಲ್ಯಾಧಾರಿತ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಕೈಜೋಡಿಸಿಬೇಕು ಎಂದು ವಿಜಯಪುರದ ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಆರ್.ಟಿ. ಉತ್ತರಕರ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ನೆಹರು ಯುವ ಕೇಂದ್ರ, ಕ್ರೀಡಾ ಸಚಿವಾಲಯ, ಆಯುಷ್ ಇಲಾಖೆ, ಭಾರತ ಸೇವಾದಳ, ರುಡ್‌ಸೆಟ್ ಸಂಸ್ಥೆ, ಸಂಗೊಳ್ಳಿ ರಾಯಣ್ಣ ಯುವ ಘಟಕ, ರೇವಣ ಸಿದ್ದೇಶ್ವರ ಯುವ ಶಿಕ್ಷಣ ಅಭಿವೃದ್ಧಿ ಸಂಘ ಉಮರಜದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಚಡಚಣ ತಾಲೂಕು ಮಟ್ಟದ ನೆರೆ-ಹೊರೆ ಯುವ ಸಂಸತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಸ್ವಯಂ ಉದ್ಯೋಗ ಒಂದು ಉಪಚಾರ. ರುಡ್‌ಸೆಟ್ ಸಂಸ್ಥೆ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ತರಬೇತಿ ನೀಡಿ ಸ್ವಯಂ ಉದ್ಯೋಗಿಗಳಾಗಿ ಮಾಡಲು ಪ್ರಯತ್ನಿಸುತ್ತಿದೆ. ಯುವಕ-ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಬ್ಯಾಗ್ ರಹಿತ ದಿನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನ, ಶಾಲಾ ಸಂಸತ್ತು, ಸಾಂಸ್ಕೃತಿಕ ಸಂಘ, ಜಲಾಮೃತದ ಮಹತ್ವ ಹಾಗೂ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಉದ್ಘಾಟನೆಯನ್ನು ಶಾಲೆ ಮುಖ್ಯ ಶಿಕ್ಷಕ ಎಸ್.ಜಿ. ಮುಚ್ಚಂಡಿ ನೆರವೇರಿಸಿದರು.
ಭಾರತ ಸೇವಾದಳದ ಸಂಘಟಿಕ ನಾಗರಾಜ ಡೊಣ್ಣೂರ ಮಾತನಾಡಿ, ರಾಷ್ಟ್ರೀಯತೆ, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ನಾಡ ಗೀತೆಗಳನ್ನು ಸುಲಲಿತವಾಗಿ ಹಾಡಲು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಯೋಗ ತರಬೇತುದಾರ ಎಂ.ಪಿ. ದೊಡ್ಡಮನಿ ಯೋಗ, ಧ್ಯಾನ, ಪ್ರಾಣಾಯಾಮ ಮಹತ್ವ ತಿಳಿಸಿ ಕೊಟ್ಟರು.
ನೆಹರು ಯುವ ಕೇಂದ್ರದ ಲೆಕ್ಕ ಪಾಲಕಿ ಬಿ.ಬಿ. ದೊಡಮನಿ, ಜಿ.ಆರ್. ಬಗಲಿ, ಎ.ಎಂ. ಪೂಜಾರಿ, ಮೋಸಿನ್ ಲೋಣಿ, ಡಾ| ಮಲ್ಲನಗೌಡ ಪಾಟೀಲ, ಬಿ.ಎಂ. ಹಬಗೊಂಡೆ, ವಿ.ಪಿ. ಕುಂಬಾರ, ಎಂ.ಎಸ್. ಪಾಟೀಲ, ಎಸ್.ಬಿ. ಪಾಟೀಲರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.