ಚಡಚಣ: ಕೇವಲ 24 ಗಂಟೆ ಕಾಲ ಪುಸ್ತಕ ಓದಿದರೆ ಯಾವ ಪ್ರಯೋಜನ ಆಗಲಾರದು. ಓದಿದ್ದನ್ನು ಅರಿಗಿಸಿಕೊಂಡು ಜಾಣ್ಮೆಯಿಂದ ಪರೀಕ್ಷೆ ಬರೆಯುವ ಕೌಶಲ್ಯ ರೂಢಿಸಿಕೊಂಡಾಗ ನಿಮ್ಮ ಜೀವನ ಉಜ್ವಲವಾಗುತ್ತದೆ ಎಂದು ಧಾರವಾಡದ ಸಿ.ಎಸ್.ಆನಂದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಂಚಗೇರಿ ಗ್ರಾಮದ ಮಾಧವಾನಂದ ಪ್ರಭೂಜಿ ಮಠದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಮಾಧವಾನಂದ ಪ್ರಭೂಜಿ ಪ್ರೌಢಶಾಲೆ, ಶಶಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ, ಹೆಚ್ಚು ಅಂಕಗಳಿಸಲು ಏನು ಮಾಡಬೇಕು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರೀಕ್ಷೆಗೆ ತಯಾರಿ ನಡೆಸಲು ನಿಮ್ಮದೆಯಾದ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಅದರಂತೆ ನಿತ್ಯ ಅಧ್ಯಯನ ಮಾಡುವುದರ ಜೊತೆಗೆ ಸಮಯದ ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯ ಎಂದರು. ಕಾರ್ಯಕ್ರಮ ಸಂಘಟಿಕರಾದ ಶಶಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಶಿ ಸಾತಲಗಾಂವ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದ್ದು, ಇದರ ಮೇಲೆ ಮಕ್ಕಳ ಭವಿಷ್ಯ ಅಡಗಿದೆ. ಮಕ್ಕಳು ನಯ, ವಿನಯ, ಗುರು ಹಿರಿಯರಿಗೆ ಗೌರವ ಅಳವಡಿಸಿಕೊಂಡು ಕಲಿತ ಶಾಲೆಗೆ, ಗ್ರಾಮಕ್ಕೆ ಹೆಸರು ತರುವಂತಹ ನಕ್ಷತ್ರಗಳಾಗಬೇಕು ಎಂದರು.
ಶಾಲೆಯಲ್ಲಿ ಗುರುವನ್ನು ದೇವರ ಸಮ ಎಂದು ತಿಳಿದು ಏಕ ಚಿತ್ತದಿಂದ ಪಾಠ ಕೇಳಿ, ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ನಿಮ್ಮ ಭವಿಷ್ಯ ಉಜ್ವಲ ಮಾಡಿಕೊಳ್ಳಿ. ಟಿವಿ ಮೊಬೈಲ್ ಗೆ ದಾಸರಾಗದೇ ಜಾಣರಾಗಿರಿ. ನಮ್ಮ ಗಡಿನಾಡಿನ ಗ್ರಾಮೀಣ ಪ್ರದೇಶದಲ್ಲಿರುವ ಶಶಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಉತ್ತಮ ಕಾರ್ಯ ಮಾಡುತ್ತ ಬಂದ್ದು ವಿದ್ಯಾರ್ಥಿಗಳ ಪಾಲಿಗೆ ಜ್ಞಾನಜ್ಯೋತಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಚಡಚಣ ಬಿಇಒ ಎಚ್.ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಯಾವ ದುಶ್ಚಟಗಳಿಗೆ ಬಲಿಯಾಗದೇ ಪುಸ್ತಕದ ಹುಳವಾಗಬೇಕು. ಸತತ ಅಭ್ಯಾಸದೊಂದಿಗೆ ಪ್ರಯತ್ನಶೀಲರಾದರೆ ಜಾಣರ ಜಾಣರಾಗಲು ಶಕ್ಯವಾಗುವುದು ಎಂದು ಹೇಳಿದರು.
ಇಂಚಗೇರಿಯ ರೇವಣಸಿದ್ಧ ಮಹಾರಾಜರು ಸಾನ್ನಿಧ್ಯ, ಮುರುಗೋಡದ ಐನಾಥಪ್ರಭು ಯನ್ನು ವಹಿಸಿದ್ದರು. ಅತಿಥಿಗಳಾಗಿ ಜಿ.ಎಸ್. ಕಾಂಬಳೆ, ಮಹಾದೇವ ಮುರಗೋಡ. ಗ್ರಾಪಂ ಅಧ್ಯಕ್ಷೆ ಭಾರತಿ ಚವ್ಹಾಣ, ಉಪಾಧ್ಯಕ್ಷೆ ಸಾಹೇಬಗೌಡ ಬಿರಾದಾರ, ತಾಪಂ ಸದಸ್ಯ ರವಿದಾಸ ಜಾಧವ, ಎಪಿಎಂಸಿ ಉಪಾಧ್ಯಕ್ಷ ಬಾಬು ಚವ್ಹಾಣ, ಎಸ್ಸೆಸ್ಸೆಲ್ಸಿ ನೋಡಲ್ ಅಧಿ ಕಾರಿ ಸುನೀಲ ಶಹಾ, ಜಿ.ಎಸ್. ಸಾತಲಗಾಂವ, ಮಲ್ಲಪ್ಪ ಸಕ್ರಿ, ಕಲ್ಲಪ್ಪ ಅರವತ್ತಿ, ವಿನೋದಗೌಡ ಬಿರಾದಾರ, ಸುಭಾಷ್ ಓಂಕಾರಶೆಟ್ಟಿ, ಆರ್.ಡಿ. ಬಿರಾದಾರ, ಶಂಕರ ಸಾತಗಾಂವ ಇದ್ದರು. ಉಪನ್ಯಾಸದಲ್ಲಿ ಚಡಚಣ ತಾಲೂಕಿನ 44 ಪ್ರೌಢಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.