Advertisement

ಎಲ್ಲರ ಸಹಕಾರದಿಂದ ಫಲಿತಾಂಶ ಸ್ಥಿರ

03:10 PM Jul 19, 2019 | Naveen |

ಚಡಚಣ: ಜೀವನದಲ್ಲಿ ಮನಸ್ಸು ಮಾಡಿದರೆ ಎಲ್ಲವೂ ಸಾಧಿಸಲು ಸಾಧ್ಯ. ಅದರಂತೆ ಉಪನ್ಯಾಸಕರು ಮನಸ್ಸು ಮಾಡಿದರೆ ಜಿಲ್ಲೆಯ ಫಲಿತಾಂಶ ಸುಧಾರಣೆ ಅಸಾಧ್ಯವಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜೆ.ಎಸ್‌. ಪೂಜೇರಿ ಹೇಳಿದರು.

Advertisement

ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಚಡಚಣ ಹಾಗೂ ಇಂಡಿ ತಾಲೂಕುಗಳ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಪಿಯುಸಿ ಫಲಿತಾಂಶದಲ್ಲಿ ಸ್ಥಿರತೆ ಇಲ್ಲ. ಒಂದು ಬಾರಿ 24ನೇ ಸ್ಥಾನದಲ್ಲಿದ್ದರೆ ಇನ್ನೊಂದು ಬಾರಿ 14ನೇ ಸ್ಥಾನದಲ್ಲಿರುತ್ತೇವೆ. ಈ ರೀತಿ ಸ್ಥಿರತೆ ಇಲ್ಲದ್ದು ಶಾಶ್ವತವಾಗಿರಲು ಸಾಧ್ಯವಿಲ್ಲ. ಜಿಲ್ಲೆಯ ಫಲಿತಾಂಶದಲ್ಲಿ ಸ್ಥಿರತೆಯನ್ನು ತರಲು ಜಿಲ್ಲೆಯ ಎಲ್ಲ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಕಷ್ಟಪಟ್ಟು ದುಡಿಯಬೇಕಾದ ಅನಿವಾರ್ಯತೆ ಇದೆ. ಉಪನ್ಯಾಸಕರು ಕಷ್ಟ ಪಟ್ಟರೆ ಜಿಲ್ಲೆಯ ಫಲಿತಾಂಶದಲ್ಲಿ ಸ್ಥಿರತೆ ಕಾಪಾಡಲು ಸಾಧ್ಯ. ಈ ಬಾರಿ ವಿಜಯಪುರ ಜಿಲ್ಲೆಯ ಪಿಯು ಫಲಿತಾಂಶ ರಾಜ್ಯದ 10ರ ಒಳಗಿನ ಸ್ಥಾನ ಪಡೆಯುವುದು ನಿಶ್ಚಿತ. ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಬೇಕಾದರೆ ಮೊದಲು ವಿದ್ಯಾರ್ಥಿಗಳು ಕಾಲೇಜಿಗೆ ನಿಯಮಿತವಾಗಿ ಬರುವಂತೆ ಕ್ರಮ ಕೈಕೊಳ್ಳಬೇಕು. ಈ ದಿಸೆಯಲ್ಲಿ ಹಾಜರಾತಿಯನ್ನ ಕಡ್ಡಾಯಗೊಳಿಸಬೇಕು, ಇದರೊಟ್ಟಿಗೆ ಪ್ರಾಚಾರ್ಯರು ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳ ಪಾಲಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿದ್ಯಾರ್ಥಿ ನಿಯಮಿತವಾಗಿ ಶಾಲೆಗೆ ಬರುವಂತಾಗಬೇಕು. ಪ್ರಾಚಾರ್ಯರ ಮತ್ತು ಉಪನ್ಯಾಸಕರು ಜಿಲ್ಲೆಯಫಲಿತಾಂಶ ಹೆಚ್ಚಳಕ್ಕೆ ಅಣಿಯಾಗುವಂತೆ ಇಲಾಖೆಯಿಂದ 108 ಮತ್ತು 54 ಸೂತ್ರಗಳನ್ನು ಸಿದ್ದಪಡಿಸಿದ್ದು, ಈಗಾಗಲೇ ಜಿಲ್ಲೆಯ ಎಲ್ಲ ಪಪೂ ಕಾಲೇಜುಗಳಿಗೆ ಇದನ್ನು ತಲುಪಿಸಲಾಗಿದೆ. ಆದ್ದರಿಂದ ಎಲ್ಲ ಉಪನ್ಯಾಸಕರು ಇದನ್ನು ಸವಾಲಾಗಿ ಸ್ವೀಕರಿಸಬೇಕು ಮತ್ತು ಈ ದಿಸೆಯಲ್ಲಿ ಪ್ರಯತ್ನ ಪ್ರಾರಂಭಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉಪನಿರ್ದೇಶಕರನ್ನು ಮತ್ತು ಜಿಲ್ಲಾ ನೌಕರರ ಸಂಘಕ್ಕೆ ಆಯ್ಕೆಯಾದ ಅಧೀಕ್ಷಕ ಗೊಂಗಡಿ ಅವರನ್ನು ಸನ್ಮಾನಿಸಲಾಯಿತು. ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಜಿ. ಮುತ್ತಿನ ಅಧ್ಯಕ್ಷತೆ ವಹಿಸಿದ್ದರು.

ನಿರ್ದೇಶಕರಾದ ಬಸವರಾಜ ಯಂಕಂಚಿ, ಆಡಳಿತಾಧಿಕಾರಿ ಜಿ. ಎಲ್. ಮೇತ್ರಿ, ಲಚ್ಯಾಣ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಕೆ.ಎ. ಉಪ್ಪಾರ, ಲೋಣಿ ಕಾಲೇಜಿನ ಪ್ರಾಚಾರ್ಯ ಎನ್‌.ಆರ್‌. ಉಟಗಿ ಭಾಗವಹಿಸಿದ್ದರು.

ಇಂಡಿ ಹಾಗೂ ಚಡಚಣ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪಪೂ ಕಾಲೇಜುಗಳ ಪ್ರಾಚಾರ್ಯರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಪ್ರಾಚಾರ್ಯ ಎಸ್‌. ಡಿ. ಚವ್ಹಾಣ ಸ್ವಾಗತಿಸಿದರು. ಎಂ.ವಿ. ಕಟಗೇರಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next