ಚಡಚಣ: ಈ ಸಲ ಮುಂಗಾರು ಹಿಂಗಾರು ಬೆಳೆಗಳು ಸಂಪೂರ್ಣವಿದ್ದು, ಖುಷಿಯಲ್ಲಿ ರೈತ ಕಾಲ ಕಳೆಯಲು ಕನಸು ಕಂಡಿದ್ದ. ಆದರೆ, ಕೊರೊನಾದಿಂದ ದೇಶವೇ ಲಾಕ್ ಡೌನ್ ಮಾಡಿದ್ದರಿಂದ ಎಲ್ಲ ವ್ಯಾಪಾರ ವಹಿವಾಟುಗಳು ಬಂದ್ ಆಗಿರುವ ಪರಿಣಾಮ ರೈತ ಕಂಗಾಲಾಗಿ ಸಾಲದಲ್ಲಿಯೇ ಜೀವನ ಸಾಗಿಸುವಂತಾಗಿದೆ. ಗೋಡಿಹಾಳ ರಸ್ತೆಯಲ್ಲಿರುವ ತೋಟದಲ್ಲಿ ರೈತ ಚನ್ನಪ್ಪ ಕರಜಗಿ 10 ವರ್ಷಗಳ ಹಿಂದೆ 100 ನಿಂಬೆ ಸಸಿಗಳನ್ನು ನೆಟ್ಟು ಪೋಷಿಸಿದ್ದು, 4 ವರ್ಷಗಳಿಂದ ಅವನಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕು ಸಾಲದಿಂದ ಮುಕ್ತನಾಗಿ ಬದುಕು ನಡೆಸುತ್ತಿದ್ದನು. ಆದರೆ, ಈ ಸಲ ಕೊರೊನಾ ಹೊಡೆತಕ್ಕೆ ಸಿಕ್ಕು ವ್ಯಾಪಾರ ಸ್ಥಗಿತಗೊಂಡು ನಿಂಬೆ ಹಣ್ಣುಗಳು ಮಾರಾಟವಾಗದೇ ಮಾರುಕಟ್ಟೆಗೆ ನಿಂಬೆ ಸಾಗಿಸಲಾಗದೇ ಸಂಕಟದಲ್ಲಿ ಸಿಲುಕೊದ್ದಾನೆ.
ಗಿಡಗಳಲ್ಲಿ ಸಾಕಷ್ಟು ಹಣ್ಣುಗಳು ಫಲ ಕೊಡುತ್ತಿದ್ದು, ಅವು ಅಲ್ಲಿಯೇ ಹಣ್ಣಾಗಿ ನಾಶವಾಗುತ್ತಿವೆ. ಎರಡು ಕೊಳವೆಬಾವಿಗಳ ಮೂಲಕ ಹನಿ ನೀರಾವರಿಯೊಂದಿಗೆ ರಸಗೊಬ್ಬರ ಸಿಂಪಡಿಸಿ, ಸಮಯಕ್ಕೆ ಸರಿಯಾಗಿ ಕಳೆ ತೆಗೆದು, ಇವು ಬೆಳೆಸುವಲ್ಲಿ ಮತ್ತೂಬ್ಬ ರೈತನಿಗೆ ಮಾದರಿಯಾಗಿರುವನು. ಅಲ್ಲಿ ಇಲ್ಲಿ ಬಡವರಿಗೆ ಕೊಟ್ಟು ನಾಶವಾಗದಂತೆ ಮಾಡುವ ಕರ್ತವ್ಯ ಇವನದಾಗಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಪರಿಹಾರ ಧನ ನೀಡಿದರೆ ರೈತರಿಗೆ ಅನುಕೂಲವಾಗುವುದು. ಇಲ್ಲವಾದರೆ ಅನ್ನದಾತ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಸಾಲ ಮಾಡಿ ನಿಂಬೆ ಗಿಡ ಹಚ್ಚಿದ್ದು, ಮಕ್ಕಳಂತೆ ಪೋಷಿಸುತ್ತ ಬಂದಿರುವೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಬರುತ್ತಿತ್ತು. ಆದರೆ, ಲಾಕ್‌ಡೌನ್ ಪರಿಣಾಮ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇದರಿಂದ ನನಗೆ ಸುಮಾರು 2 ಲಕ್ಷದಷ್ಟು ಹಾನಿಯಾಗಿದೆ. ದಿನಂಪ್ರತಿ ಸಾವಿರಾರು ಹಣ್ಣುಗಳು ನಾಶವಾಗುತ್ತಿವೆ. ಭರಪೂರ ಕಾಯಿ ಇದ್ದರೂ ಸಿಕ್ಕ ಬೆಲೆಗೆ ಮಾರುವ ಪ್ರಸಂಗ ಬಂದಿದೆ. ಸರಕಾರ ರೈತರ ಸಮಸ್ಯೆ ಗುರುತಿಸಿ ಸೂಕ್ತ ಪರಿಹಾರ ನೀಡಿದರೆ ನೆಮ್ಮದಿ ದೊರೆಯಬಹುದು.
ಚನ್ನಪ್ಪ ಕರಜಗಿ,
ನಿಂಬೆ ಬೆಳೆದ ರೈತ