ಚಡಚಣ: ಸಹಕಾರಿ ಸಂಘಗಳಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
ಪಟ್ಟಣದ ಪಾಟೀಲ ನಗರದಲ್ಲಿ ಚಡಚಣ ಭಾಗದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಒಂದು ದೇಶ ಆರ್ಥಿಕವಾಗಿ ಸದೃಢವಾಗಬೇಕಾದರೆ ಮೊದಲು ಸಹಕಾರಿ ಸಂಘಗಳು ಸದೃಢವಾಗಿ ಬೆಳೆಯಬೇಕು ಎಂದರು.
ಒಂದು ಉತ್ತಮವಾದ ಸಹಕಾರಿ ಸಂಘ ಕಟ್ಟುವುದರಿಂದ ಸಾವಿರಾರು ಜನ ಶಿಕ್ಷಕರಿಗೆ ಆರ್ಥಿಕವಾಗಿ ಸಹಾಯವಾಗಲು ನೆರವಾಗುತ್ತದೆ. ಶ್ರೀಮಂತರ ಹತ್ತಿರ, ಮೀಟರ್ ಬಡ್ಡಿ ದಂಧೆಕೋರರ ಹತ್ತಿರ ಬಡ್ಡಿ, ಚಕ್ರ ಬಡ್ಡಿಗೆ ಸಾಲ ತೆಗೆದುಕೊಂಡು ತಿಂಗಳ ಕೊನೆಯಲ್ಲಿ ಬರುವ ಸಂಬಳ ಅವರ ಕೈಗೆ ಕೊಟ್ಟು ಖಾಲಿ ಕೈಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಹಿಂದಿನ ಕಾಲದಲ್ಲಿತ್ತು. ಆದರೆ ಇಂದು ಇಂತಹ ಸಹಕಾರಿ ಸಂಘಗಳಿಂದ ಶಿಕ್ಷಕರಿಗೆ ಕಡಿಮೆ ಬಡ್ಡ ದರದಲ್ಲಿ ಸಾಲ ಸಿಗುವುದರಿಂದ ಬಹಳಷ್ಟು ಅನುಕೂಲವಾಗಿದೆ ಎಂದರು.
ನಾಗಾಲೋಟದಲ್ಲಿ ಬೆಳೆಯುತ್ತಿರುವ ಖಾಸಗಿ ಶಾಲೆಗಳ ಭರಾಟೆಯಲ್ಲಿ ಕನ್ನಡ ಶಾಲೆಗಳನ್ನು ಉಳಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣ ವ್ಯಾಮೋಹ ದಿನ ದಿನಕ್ಕೂ ಹೆಚ್ಚಾಗತೊಡಗಿದೆ. ಖಾಸಗಿ ಶಾಲೆಗಳು ಮನೆ ಬಾಗಿಲಿಗೆ ಬಂದು ಮಕ್ಕಳನ್ನು ತಮ್ಮ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಹೋಗಿ ಮತ್ತೆ ಮರಳಿ ತಂದು ಬಿಡಿತ್ತಾರೆ. ಸರಕಾರಿ ಶಾಲೆಯಲ್ಲಿ ಕುಳಿತು ಶಾಲೆಗೆ ಬನ್ನಿ ಎಂದರೆ ಹೇಗೆ ಸಾಧ್ಯ? ಇನ್ನಾದರೂ ಎಚ್ಚೆತ್ತುಕೊಂಡು ಸರಕಾರಿ ಕನ್ನಡ ಶಾಲೆಗಳನ್ನು ಉಳಿಸೋಣ ಎಂದು ಹೇಳಿದರು.
ಸಹಕಾರಿ ಪತ್ತಿನ ಸಂಘ ಅಧ್ಯಕ್ಷ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದ ಕಾತ್ರಾಳ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಬಿಜೆಪಿ ಯುವ ಧುರೀಣ ಗೋಪಾಲ ಕಾರಜೋಳ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಾವೀರ ಮಾಲಾಗಾಂವೆ, ಎಐಪಿಟಿಎಫ್ ಉಪಾಧ್ಯಕ್ಷ ಬಸವರಾಜ ಗುರಿಕಾರ, ಕ.ರಾ.ಪ್ರಾ.ಶ.ಶಿ.ಸಂಘ ರಾಜ್ಯಾಧ್ಯಕ್ಷ ವಿ.ಎಂ. ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಜಿಪಂ ಸದಸ್ಯರಾದ ಶಿವಶರಣ ಭೈರಗೊಂಡ, ಭೀಮಾಶಂಕರ ಬಿರಾದಾರ, ಚಡಚಣ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹಾದಿಮನಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಪಿ. ಠಾಕೂರ ಸೇರಿದಂತೆ ಶಿಕ್ಷಕರು ಇದ್ದರು.