Advertisement

ಚಾಚು ಟಿ ಸ್ಟಾಲ್‌ನಲ್ಲಿ 5 ರೂ.ಗೆ ಟಿಫಿನ್‌ 

04:43 PM Sep 17, 2018 | |

ದಿನದಿಂದ ದಿನಕ್ಕೆ ಪೆಟ್ರೋಲ್‌ ಬೆಲೆ ಏರಿಕೆ ಆಗುತ್ತಲೇ ಇದೆ. ಜೊತೆಗೆ, ಉದ್ದಿನ ಬೆಳೆ ಸೇರಿದಂತೆ ದಿನಸಿ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದೆ. ಹಿಗಿದ್ದರೂ ಕಳೆದ ಐದು ವರ್ಷಗಳಿಂದ ಬೆಲೆ ಏರಿಕೆ ಮಾಡದೇ ಗ್ರಾಹಕರಿಗೆ ರುಚಿಕಟ್ಟಾದ ಬಿಸಿ ಬಿಸಿ ತಿನಿಸು ನೀಡುವ ಮೂಲಕ ಕಳೆದಗ್ರಾಹಕರನ್ನು ಸೆಳೆದುಕೊಂಡಿದೆ ಧಾರವಾಡದ ಚಾಚು ಟೀ ಸ್ಟಾಲ್‌.

Advertisement

ನಗರದ ಸಂಗಮ್‌ ಟಾಕೀಸ್‌ ಎದುರಿಗೆ ಇರುವ ಚಾಚು ಟೀ ಸ್ಟಾಲ್‌ನ್‌ ತಿನಿಸುಗಳು ಇಲ್ಲಿ ಕಡಿಮೆ ಬೆಲೆ ಹಾಗೂ ರುಚಿಗೆ ಮಾರು ಹೋಗದವರು ಧಾರವಾಡದಲ್ಲಿ ಯಾರೂ ಇಲ್ಲ ಅನ್ನಬೇಕು.  ಹೇಳಿ ಕೇಳಿ ಇದು ತುಟ್ಟಿ ಕಾಲ. ಹಾಗಿದ್ದರೂ ಇಲ್ಲಿ ಕೇವಲ 5 ರೂ.ಗೆ ರುಚಿ ರುಚಿಯಾದ ಬಿಸಿ ಬಿಸಿ ವಡೆ, ಸಾಬೂದಾನಿ ವಡೆ ಹಾಗೂ ಚಟ್ನಿ ಸಿಗುತ್ತದೆ ಅಂದರೆ ನೀವೂ ನಂಬಲೇ ಬೇಕು. 10 ರೂ. ಕೊಟ್ಟು ಎರಡು ಉದ್ದಿನ ವಡೆ  ಪಡೆದು ಸವಿಯಬಹುದು. 

ಈ ಹೋಟೆಲ್‌ ಮಾಲೀಕರಾದ ದಿಲೀಪ ಅಣ್ಣಿಗೇರಿ ಅವರು ಹೆಚ್ಚು ಲಾಭ ಬಯಸುವವರಲ್ಲ. ಕಡಿಮೆ ಲಾಭದಲ್ಲಿಯೇ ಹೆಚ್ಚು ರುಚಿಕರ ಆಹಾರ ಒದಗಿಸುವ ಒದಗಿಸಬೇಕು ಎಂಬ ಆಸೆ ಇವರದ್ದು. 1999 ರಿಂದ ಈ ಉದ್ಯಮದಲ್ಲಿರುವ ಇವರು, ಮೊದಲು ಕೇವಲ 1 ರೂ.ಗೆ ಈ ತಿಂಡಿಗಳನ್ನು ಒದಗಿಸುತ್ತಿದ್ದರು. ವರ್ಷಗಳ ಕಳೆದಂತೆ ಆ ಬೆಲೆ 2 ರೂ., 3 ರೂ., 4 ರೂ., ಗಳಿಗೆ ಏರಿಕೆಯಾಗಿತ್ತು. ಇದೀಗ 5 ರೂ. ಮಾಡಿದ್ದಾರೆ. ಐದು ವರ್ಷಗಳ ಹಿಂದೆ 5 ರೂ. ಮಾಡಿದ್ದು, ಈವರೆಗೂ ಆ ಬೆಲೆ ಏರಿಕೆ ಮಾಡಿಲ್ಲ.

ಬೆಳಿಗ್ಗೆ ದೋಸಾ, ಫಲಾವ್‌, ಪುರಿ, ಬಜೆ, ಮಿರ್ಚಿ ತಯಾರಿಸುತ್ತಾರೆ. ಸಂಜೆ ಆಗುತ್ತಿದ್ದಂತೆಯೇ ನಗರದ ತಿಂಡಿ ಪ್ರಿಯರು ತಮ್ಮ ಇಷ್ಟದ ಗರಿಗರಿಯಾದ ಉದ್ದಿನ ವಡೆ, ಸಾಬೂದಾನಿ ವಡೆ ಹಾಗೂ ಪಡ್ಡು ತಿನ್ನಲು ಈ ಹೋಟೆಲಿಗೆ ಮುಗಿ ಬೀಳುತ್ತಾರೆ. ದಿನಕ್ಕೆ ಏನಿಲ್ಲವೆಂದರೂ 300 ರಿಂದ 400 ಗ್ರಾಹಕರು ಇಲ್ಲಿಗೆ ತಪ್ಪದೇ ಬರುತ್ತಾರೆ. ಈಗ ಹೋಟೆಲಿನ ಕೆಲಸದಲ್ಲಿ ದಿಲೀಪ್‌ ಅವರೊಂದಿಗೆ, ಅವರ ಪುತ್ರ ಆಕಾಶ ಕೂಡ  ಕೈ ಜೋಡಿಸಿದ್ದು, 3 ಜನ ಕೆಲಸಗಾರರೂ ಇದ್ದಾರೆ. ರಮಜಾನ್‌ ಸಮಯದಲ್ಲಿ ಸಂಜೆ ಹೆಚ್ಚಿನ ಆರ್ಡರ್‌ಗಳಿರುತ್ತವೆ. ಮುಸ್ಲಿಂ ಬಾಂಧವರು ರೋಜಾ ಬಿಡುವ ಸಮಯದಲ್ಲಿ ಈ ತಿಂಡಿಗಳನ್ನು ಪಾರ್ಸಲ್‌ ತೆಗೆದುಕೊಂಡು ಹೋಗುತ್ತಾರೆ. 
 ತಿಂಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳಾದ ಅಕ್ಕಿ, ಉದ್ದಿನಬೆಳೆ, ಸಾಬೂದಾನಿಯನ್ನು ಮನೆಯಲ್ಲಿಯೇ ನೆನೆ ಹಾಕಿ ಹಿಟ್ಟು ತಯಾರಿಸಲಾಗುತ್ತದೆ. ಕಲಬೆರಕೆಗಳಿಗೆ ನಮ್ಮಲ್ಲಿ  ಅವಕಾಶವಿಲ್ಲ. ಉತ್ತಮ ಎಣ್ಣೆಯನ್ನೇ ಬಳಸುವುದರ ಜೊತೆಗೆ ಶುಚಿತ್ವಕ್ಕೆ ಆದ್ಯತೆ ನೀಡಿರುವ ಕಾರಣ ಎರಡು ದಶಕಗಳು ಕಳೆದರೂ ರುಚಿಯಲ್ಲಿ ಸ್ವಲ್ಪವೂ ಬದಲಾವಣೆ ಆಗಿಲ್ಲ ಎನ್ನುತ್ತಾರೆ ದಿಲೀಪ್‌.

ದಿಲೀಪ್‌ “ಚಾಚು’ಆದ್ರು 
ಸಂಗಮ ಚಿತ್ರ ಮಂದಿರ ಇರುವ ಚಾಚು ಟೀ ಸ್ಟಾಲ್‌ ರವಿವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 9:00 ರಿಂದ 12:30 ಹಾಗೂ ಸಂಜೆ 4:30 ರಿಂದ 8:30 ರವರೆಗೆ ತೆರೆದಿರುತ್ತದೆ. ಈ ವೇಳೆಯಲ್ಲಿ ಟೀ ಸ್ಟಾಲ್‌ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. ಈ ಚಾಚು ಟೀ ಸ್ಟಾಲ್‌ಗೆ ಹೆಸರನ್ನೂ ಸಹ ಗ್ರಾಹಕರೇ ನೀಡಿದ್ದಾರೆ. ಮೊದಲು ಡಬ್ಟಾ ಅಂಗಡಿಯಲ್ಲಿ ಆರಂಭಗೊಂಡಿದ್ದ ಟೀ ಸ್ಟಾಲ್‌ನಲ್ಲಿ ದಿಲೀಪ ಅವರನ್ನು ಗ್ರಾಹಕರು ಚಾಚು ಅಂತ ಕರೆಯುತ್ತಿದ್ದರು. ಇದರಿಂದ ಚಾಚು ಟೀ ಸ್ಟಾಲ್‌ ಎಂಬ ಹೆಸರು ಬಂತು. 

Advertisement

ಲಾಭದ ದೃಷ್ಠಿಯಿಂದ ನಾವು ಈ ಹೊಟೇಲ್‌ ನಡೆಸುತ್ತಿಲ್ಲ, ಬದಲಿಗೆ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ರುಚಿ ರುಚಿಯಾದ ತಿಂಡಿ ಒದಗಿಸುವುದೇ ನಮ್ಮ ಉದ್ದೇಶವಷ್ಟೇ. ಹೀಗಾಗಿ ಕಳೆದ ಎರಡು ದಶಕಗಳಿಂದಲೂ ಗ್ರಾಹಕರು ನಮ್ಮ ಕೈ ಹಿಡಿದಿದ್ದಾರೆ.
-ದಿಲೀಪ ಅಣ್ಣಿಗೇರಿ, ಮಾಲೀಕ, ಚಾಚು ಟೀ ಸ್ಟಾಲ್‌ .

ಶಶಿಧರ್‌ ಬುದ್ನಿ 

Advertisement

Udayavani is now on Telegram. Click here to join our channel and stay updated with the latest news.

Next