ಮಾತಿನಲ್ಲೇ ಮೋಡಿ ಮಾಡಿ, ಹುಡುಗಾಟದಲ್ಲೇ ಕಾಲ ಕಳೆದ ಮೂವರು “ಚಾಲಿ ಪೋಲಿಗಳು’ ಕೋಸ್ಟಲ್‌ವುಡ್‌ನಲ್ಲಿ ಮಾಡಿದ ದಾಖಲೆ ಹೊಸ ಮನ್ವಂತರವನ್ನು ಸೃಷ್ಟಿಸಿತ್ತು. ಒಂದೊಮ್ಮೆ ತುಳು ಸಿನೆಮಾಗಳು ಯಾವುದೇ ಬೆಳವಣಿಗೆಯನ್ನು ಕಾಣುತ್ತಿಲ್ಲ ಎಂಬ ಕಾಲದಲ್ಲಿ ತುಳು ಸಿನೆಮಾಗಳಿಗೆ ಆಸರೆಯಾಗಿ ನಿಂತ ಸಿನೆಮಾ “ಚಾಲಿ ಪೋಲಿಲು’. ಕೋಸ್ಟಲ್‌ವುಡ್‌ನಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ (511 ದಿನಗಳ ಪ್ರದರ್ಶನ) ಯಶಸ್ವಿ ಪ್ರದರ್ಶನ ಕಂಡ ಈ ಸಿನೆಮಾ ತುಳು ಸಿನೆಮಾ ಲೋಕಕ್ಕೆ ಜೀವ ಸೆಲೆ ದೊರೆತಂತಾಗಿತ್ತು.
ಈಗ ಕೋಸ್ಟಲ್‌ವುಡ್‌ಗೆ ಖುಷಿಯ ಸಂಗತಿಯೆಂದರೆ, ಮತ್ತೂಮ್ಮೆ “ಚಾಲಿ ಪೋಲಿಲು’ ಎರಡನೇ ರೂಪದಲ್ಲಿ ಅರ್ಥಾತ್ “ಭಾಗ 2’ರ ಕಂತಿನಲ್ಲಿ ಮತ್ತೂಮ್ಮೆ ತೆರೆ ಮೇಲೆ ಬರಲು ಅಣಿಯಾಗುತ್ತಿದೆ. ಮೂವರು ಚಾಲಿಪೋಲಿಲು ಮಾಡಿದ ಎಡವಟ್ಟಿನ ಕೊನೆಯ ದೃಶ್ಯದಿಂದ ಕಥೆ ಮತ್ತೆ ಆರಂಭವಾಗಲಿದೆ. ಚಾಲಿಪೋಲಿಲು ಸಿನೆಮಾದಲ್ಲಿ ಯಾವೆಲ್ಲ ಕಲಾವಿದರು ಇದ್ದಾರೋ ಅವರೆಲ್ಲ ಭಾಗ ಎರಡರಲ್ಲಿಯೂ ಇರಲಿದ್ದಾರೆ.
ತುಳುಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿ ದಾಖಲೆಯ ಮೇಲೆ ದಾಖಲೆ ಬರೆದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಮೂಡಿಬಂದ ಮೊದಲ “ಚಾಲಿಪೋಲಿಲು’ ಸ್ಯಾಂಡಲ್‌ವುಡ್‌ನಲ್ಲಿಯೂ ಮೆಚ್ಚುಗೆ ಗಿಟ್ಟಿಸಿತ್ತು. ವಿಶೇಷವೆಂದರೆ ಪ್ರಕಾಶ್ ಪಾಂಡೇಶ್ವರ ಅವರು ಆ್ಯಕ್ಷನ್ ಕಟ್ ಹೇಳಿದ “ದಬಕ್ ದಬ ಐಸಾ’ ಸಿನೆಮಾ ಕೂಡ ಕೋಸ್ಟಲ್‌ವುಡ್‌ನಲ್ಲಿ ಇನ್ನೊಂದು ಸಾಧನೆ ಬರೆದಿತ್ತು. ಇದೇ ಆಶಯದೊಂದಿಗೆ ಈಗ ಚಾಲಿಪೋಲಿಲು ಎರಡನೇ ಭಾಗದ ಸಿನೆಮಾ ಆರಂಭಿಸಲು ನಿರ್ಧರಿಸಿದ್ದಾರೆ. ಪ್ರಕಾಶ್ ಪಾಂಡೇಶ್ವರ ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಸದ್ಯ ಎರಡನೇ ಚಾಲಿಪೋಲಿಗಳ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಎಲ್ಲ ಪೂರ್ಣವಾದ ಬಳಿಕ ಕಲಾವಿದರ ಟೈಮಿಂಗ್ಸ್ ಹಾಗೂ ಶುಭ ಮುಹೂರ್ತ ನೋಡಿಕೊಂಡು ಸಿನೆಮಾ ಶೂಟಿಂಗ್ ಆರಂಭಿಸಲು ಮಾತುಕತೆ ನಡೆಯುತ್ತಿದೆ.
ಸದ್ಯ ಕೋಸ್ಟಲ್‌ವುಡ್‌ನಲ್ಲಿ ಒಳ್ಳೊಳ್ಳೆ ಸಿನೆಮಾ ಬರುತ್ತಿದ್ದರೂ, ಜನರು ಕೋಸ್ಟಲ್‌ವುಡ್ ಕಡೆಗೆ ಸ್ವಲ್ಪ ನಿರಾಸಕ್ತಿ ತೋರಿದಂತಿದೆ. ಹೀಗಾಗಿಯೇ ಒಳ್ಳೆಯ ಸಿನೆಮಾ ಕೂಡ ಕಲೆಕ್ಷನ್‌ನಲ್ಲಿ ಸೋಲುತ್ತಿದೆ. ಒಳ್ಳೆಯ ಸಿನೆಮಾ ಮಾಡುವುದೇ ತಪ್ಪಾ? ಎಂದು ಪ್ರಶ್ನಿಸುವ ಕಾಲವೂ ಉಂಟು. ಇಂತಹ ಪಶ್ಚಾತಾಪದ ಸಂಗತಿಗಳಿಗೆ ಇತಿಶ್ರೀ ಹಾಡಲು ಹೊಸ ತುಳು ಸಿನೆಮಾ ಒಂದು ಕೋಸ್ಟಲ್‌ವುಡ್‌ನಲ್ಲಿ ಸದ್ದು ಮಾಡಬೇಕಾದ ಅನಿವಾರ್ಯತೆ ಇದೆ. “ಚಾಲಿಪೋಲಿಲು- 2′ ಬಂದರೆ ಇಂತಹ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬ ಮಾತು ಕೋಸ್ಟಲ್‌ವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಚಾಲಿಪೋಲಿಲು ಮೊದಲ ಭಾಗದಲ್ಲಿ ನವೀನ್ ಡಿ. ಪಡೀಲ್ ಅವರನ್ನು ಮುಖ್ಯ ನೆಲೆಯಲ್ಲಿಟ್ಟು, ದೇವದಾಸ್ ಕಾಪಿಕಾಡ್ ಹಾಗೂ ಭೋಜರಾಜ್ ವಾಮಂಜೂರ್ ಅವರ ಒಡನಾಟದ ಮೂಲಕವಾಗಿ ಕುಟುಂಬದೊಳಗಿನ ಭಾವನಾತ್ಮಕತೆಯನ್ನು ಹೆಣೆಯಲಾಗಿತ್ತು. ಹಾದಿ ತಪ್ಪಿ ನಡೆದಾಗ ಗದರಿಸುವ ಹಾಗೂ ಪರಿಣಾಮವನ್ನು ಅನುಭವಿಸುವ ಸಂದೇಶ ಅತ್ಯದ್ಬುತವಾಗಿತ್ತು. ಅರವಿಂದ ಬೋಳಾರ್ ಸಿನೆಮಾಕ್ಕೆ ಹೊಸ ರೂಪ ನೀಡಿದ್ದರು. ಇದೇ ಗೆಟಪ್‌ನೊಂದಿಗೆ ಈಗ “ಚಾಲಿಪೋಲಿಲು- 2′ ಮಾಡುವ ಬಗ್ಗೆ ಪ್ರಕಾಶ್ ಪಾಂಡೇಶ್ವರ ಲೆಕ್ಕ ಹಾಕಿದ್ದಾರೆ.
– ದಿನೇಶ್ ಇರಾ