ಚಾಮರಾಜನಗರ: ಬೇಸಿಗೆ ಸಂದರ್ಭದಲ್ಲೇ, ತೆರವಾದ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬೇರೆ ಅಧಿಕಾರಿಯನ್ನು ನೇಮಿಸದೇ ಇದ್ದದ್ದು ಈ ಬಾರಿ ಕಾಡ್ಗಿಚ್ಚು ಮುನ್ನೆಚ್ಚರಿಕೆ, ನಿರ್ವಹಣೆ ವೈಫಲ್ಯಕ್ಕೆ ಕಾರಣವಾಯಿತೇ? ಒಂದು ವರ್ಷ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಶೂನ್ಯ ಬೆಂಕಿ (ಜೀರೋ ಫೈರಿಂಗ್) ಇದ್ದ ಮೇಲೆ ಮುಂದಿನ ವರ್ಷ ಭಾರೀ ಪ್ರಮಾಣದ ಬೆಂಕಿ ಬೀಳುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಹೀಗಿರುವಾಗ ಈ ಬಗ್ಗೆ ಸೂಕ್ತ ಮುಂಜಾಗ್ರತೆ ವಹಿಸಲಿಲ್ಲವೇಕೆ? -ಪರಿಸರ ಪ್ರೇಮಿಗಳು, ವನ್ಯ ಜೀವಿ ಸಂಘ ಸಂಸ್ಥೆಗಳು ಎತ್ತಿರುವ ಪ್ರಮುಖ ಪ್ರಶ್ನೆಗಳಿವು.
ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ತಾಣ. ಅಲ್ಲದೇ ಬಂಡೀಪುರ, ನಾಗರ ಹೊಳೆ, ಮಧುಮಲೈ ಅರಣ್ಯ ಸಮುತ್ಛಯ ಜಗತ್ತಿನಲ್ಲೇ, ಹುಲಿಗಳ ಆವಾಸಕ್ಕೆ, ಸಂತಾನಾಭಿವೃದ್ಧಿಗೆ ಅತಿ ಹೆಚ್ಚು ಪ್ರಶಸ್ತ ವಾತಾವರಣ ಉಳ್ಳ ಪ್ರದೇಶಗಳು. ವನ್ಯಜೀವಿಗಳ ವಿಷಯದಲ್ಲಿ ಮುಖ್ಯ ಅರಣ್ಯವಾದ ಬಂಡೀಪುರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯನ್ನು ಖಾಲಿ ಬಿಟ್ಟು, ಅಲ್ಲಿಗೆ ನೆರೆಯ ಜಿಲ್ಲೆಯ ಅಧಿಕಾರಿಗೆ ಪ್ರಭಾರ ವಹಿಸುವ ಅಭಾವ ಪರಿಸ್ಥಿತಿ ಏನಿತ್ತು ಎಂಬುದು ವನ್ಯಜೀವಿ ಹೋರಾಟಗಾರರ ಪ್ರಶ್ನೆ.
ಮೈಸೂರು ವೃತ್ತದಂಥ ಹೆಚ್ಚು ವ್ಯಾಪ್ತಿಯ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅಂಬಾಡಿ ಮಾಧವ್‌ರನ್ನೇ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪ್ರಭಾರ ನೀಡಿ ಮುಂದುವರಿಸಲಾಯಿತು. ಇಂತಿರುವಾಗ ಬಂಡೀಪುರದಂಥ ಮಹತ್ವದ ಅರಣ್ಯ ಪ್ರದೇಶದ ಜವಾಬ್ದಾರಿಯನ್ನೂ ಅವರಿಗೇ ವಹಿಸಿದರೆ ನಿರ್ವಹಣೆ ಕಷ್ಟ. ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗಲ್ಲ ಎನ್ನುತ್ತವೆ ಮೂಲಗಳು.
ನಿರ್ವಹಣೆಯ ವೈಫಲ್ಯ: ಬಿ.ಕೆ. ಸಿಂಗ್ ಕಾಡಿಗೆ ಬೆಂಕಿ ಬೀಳಲು ಪ್ರಶಸ್ತವಾದ ಬೇಸಿಗೆಯಂಥ ಸಂದರ್ಭದಲ್ಲೇ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಖಾಲಿ ಬಿಟ್ಟು ಪ್ರಭಾರ ವಹಿಸಿರುವುದು ದೊಡ್ಡ ತಪ್ಪು, ನಿರ್ವಹಣೆಯ ವೈಫಲ್ಯವಾಗಿದೆ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆಯ ನಿವೃತ್ತ ಮುಖ್ಯಸ್ಥ ಬಿ.ಕೆ. ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಅರಣ್ಯ ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಪ್ರದೇಶ. ಕಾಡ್ಗಿಚ್ಚು ಹರಡುವ ಸಂದರ್ಭದಲ್ಲೇ ಇಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಖಾಲಿಯಿದೆ ಎಂದ ಮೇಲೆ ಇದು ಕ್ಷಮಿಸಲಾಗದ ತಪ್ಪು ಎಂದರು.
– ಕೆ.ಎಸ್.ಬನಶಂಕರ ಆರಾಧ್ಯ