Advertisement

ಸಿಇಟಿ ಸಾಧಕರ ಸಂಭ್ರಮ

02:21 PM Jun 02, 2018 | Harsha Rao |

ಮಂಗಳೂರು: ಕರ್ನಾಟಕ ಸರಕಾರದ ಈ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ  ಮಂಗಳೂರಿನ ಕೊಡಿಯಾಲಬೈಲ್‌ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ನಾರಾಯಣ ಪೈ ಅವರು ಎಂಜಿನಿಯರಿಂಗ್‌ನಲ್ಲಿ  ದ್ವಿತೀಯ ಹಾಗೂ ಬಿ-ಫಾರ್ಮದಲ್ಲಿ  5ನೇ ರ್‍ಯಾಂಕ್‌ ಗಳಿಸಿದ್ದಾರೆ. ಜತೆಗೆ ಪಶು ವೈದ್ಯಕೀಯ ವಿಭಾಗದಲ್ಲಿ ಮಂಗಳೂರು ವಳಚ್ಚಿಲ್‌ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನ ವೈಶ್ವಿ‌ ಪಿ.ಜೆ. ಅವರು 4ನೇ ರ್‍ಯಾಂಕ್‌ ಹಾಗೂ ಇದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡಿ ಬಳಿಕ ಬೀದರ್‌ ಶಾಹೀನ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿನೀತ್‌ ಮೇಗೂರ್‌ ಅವರು ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

Advertisement

ವಿನೀತ್‌ಗೆ ಪಶು ವೈದ್ಯಕೀಯದಲ್ಲಿ  ಪ್ರಥಮ ರ್‍ಯಾಂಕ್‌
ಪ್ರಥಮ ಪಿಯುಸಿಯನ್ನು ವಳಚ್ಚಿಲ್‌ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನಲ್ಲಿ ಕಲಿತಿರುವ ವಿನೀತ್‌ ಮೇಗೂರ್‌, ಪಶು ವೈದ್ಯಕೀಯ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಬೀದರ್‌ನ ದೇವಿ ಕಾಲನಿಯ ಡಾ| ದೀಪಕ್‌ ಮೇಗೂರ್‌ ಹಾಗೂ ಡಾ| ಭಾರತಿ ಮೇಗೂರ್‌ ಅವರ ಪುತ್ರನಾಗಿರುವ ಇವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಯನ್ನು ಬೀದರ್‌ನಲ್ಲೇ ಮಾಡಿದ್ದರು. 

ವಿನೀತ್‌ ಅವರ ತಂದೆ-ತಾಯಿ ಇಬ್ಬರೂ ಕಣ್ಣಿನ ತಜ್ಞ ವೈದ್ಯ ರಾಗಿದ್ದು, ಮಗನನ್ನೂ ಡಾಕ್ಟರ್‌ ಮಾಡುವ ಗುರಿಯನ್ನು ಹೊಂದಿದ್ದಾರೆ. ಇವರು ನೀಟ್‌ ಪರೀಕ್ಷೆಯನ್ನೂ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಮಗನ ಸಾಧನೆಯು ತಮಗೆ ತುಂಬಾ ಸಂತೋಷ ಕೊಟ್ಟಿದ್ದು, ಆತನ ನೀಟ್‌ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ನೀಟ್‌ ಪರೀಕ್ಷೆಯನ್ನು ಹೆಚ್ಚು ಫೋಕಸ್‌ ಮಾಡಿದ್ದರಿಂದ ಸಿಇಟಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಸಿಇಟಿಯಲ್ಲಿ ರ್‍ಯಾಂಕ್‌ ನಿರೀಕ್ಷಿಸಿರಲಿಲ್ಲ. ಆದರೂ ರ್‍ಯಾಂಕ್‌ ಬಂದಿರುವುದು ಸಂತಸ ತಂದಿದೆ. ನಾವು ಕಾಲೇಜಿನಲ್ಲಿ 14 ಗಂಟೆಗಳ ಯೋಜನೆ ಹಾಕಿ ಅಧ್ಯಯನ ಮಾಡುತ್ತಿದ್ದೆವು. ಹೀಗಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಪಿಯುಸಿಯಲ್ಲಿ  ಶೇ. 91 ಅಂಕ ಪಡೆದಿದ್ದೇನೆ.
– ವಿನೀತ್‌

**

Advertisement


ನಾರಾಯಣ ಪೈ ಎಂಜಿನಿಯರಿಂಗ್‌ ದ್ವಿತೀಯ ರ್‍ಯಾಂಕ್‌
ನಗರದ ಕೆನರಾ ಬ್ಯಾಂಕ್‌ನಲ್ಲಿ ಚೀಫ್ ಮ್ಯಾನೇಜರ್‌ ಆಗಿರುವ ಸುರೇಂದ್ರ ಪೈ ಹಾಗೂ ಸುಧಾ ಪೈ ಪುತ್ರ ನಾರಾಯಣ ಪೈ. ಅವರು ಪಿಯುಸಿಯಲ್ಲಿ 580 ಅಂಕಗಳನ್ನು ಪಡೆದಿದ್ದಾರೆ. ಜೆಇಇ ಮೈನ್ಸ್‌ನಲ್ಲಿ 3,208ನೇ ರ್‍ಯಾಂಕ್‌ ಪಡೆ ದಿದ್ದು, ನೀಟ್‌, ನಾಟಾ (ಎನ್‌ಎಟಿಎ) ಪರೀಕ್ಷೆಯನ್ನೂ ಬರೆದಿದ್ದಾರೆ. 

ಪರೀಕ್ಷೆ ವೇಳೆ ಸಮಯದ ಹೊಂದಾಣಿಕೆ ಮುಖ್ಯ. ಶಾರದಾ ಕೋಚಿಂಗ್‌ನಲ್ಲಿ ತರಬೇತಿ ಪಡೆದಿದ್ದು, ಸಂಶಯಗಳಿಗೆ ಪ್ರಾಧ್ಯಾಪಕ ರಿಂದ ಪರಿಹಾರ ಪಡೆಯುತ್ತಿದ್ದೆ ಎನ್ನುತ್ತಾರೆ ನಾರಾಯಣ ಪೈ. ನಾವು ಓದಿನ ಕುರಿತು ಯಾವುದೇ ಒತ್ತಡ ಹೇರಿಲ್ಲ. ಆತನ ಆಸಕ್ತಿಯಿಂದಲೇ ಓದಿದ್ದಾನೆ. ಜತೆಗೆ ಕಂಪ್ಯೂಟರ್‌ ಎಂಜಿನಿಯರ್‌ ಆಗಬೇಕು ಎಂದು ಹೇಳುತ್ತಿದ್ದು, ಅದಕ್ಕೂ ಪ್ರೋತ್ಸಾಹ ನೀಡುತ್ತೇವೆ ಮಗನ ಫಲಿತಾಂಶ ಅತ್ಯಂತ ಸಂತೋಷ ತಂದಿದೆ ಎಂದು ನಾರಾಯಣ ಅವರ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. 

ಸಿಇಟಿಯಲ್ಲಿ ಮೊದಲ 20ರೊಳಗೆ ರ್‍ಯಾಂಕ್‌ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಎಂಜಿನಿಯರಿಂಗ್‌ನಲ್ಲಿ ದ್ವಿತೀಯ ರ್‍ಯಾಂಕ್‌ ಬಂದಿರುವುದು ಅತ್ಯಂತ ಖುಶಿ ತಂದಿದೆ. 
ಐಐಟಿ ಪ್ರವೇಶಕ್ಕೂ ಪರೀಕ್ಷೆ ಬರೆದಿದ್ದು, ಅದರ ಫಲಿತಾಂಶ ನೋಡಿ ಅಲ್ಲಿಗೆ ಸೇರಲಿದ್ದೇನೆ. ಇಲ್ಲದೇ ಇದ್ದರೆ ಸುರತ್ಕಲ್‌ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್‌ ಮಾಡಲಿದ್ದೇನೆ. ಕಂಪ್ಯೂಟರ್‌ ಎಂಜಿನಿಯರಿಂಗ್‌ ಆಗಬೇಕೆನ್ನುವುದು ನನ್ನ ಗುರಿ.
– ನಾರಾಯಣ ಪೈ

**


ವೈಶ್ವಿ‌ಗೆ ಪಶು ವೈದ್ಯಕೀಯ ಚತುರ್ಥ ರ್‍ಯಾಂಕ್‌
ಚಿಕ್ಕಬಳ್ಳಾಪುರದ ತರಕಾರಿ ಉದ್ಯಮಿ ಜಗದೀಶ್‌ ಹಾಗೂ ಪದ್ಮಾ ದಂಪತಿಯ ಪುತ್ರಿ ವೈಶ್ವಿ‌ ಪಿ.ಜೆ. ಅವರು ಎಕ್ಸ್‌ಪರ್ಟ್‌ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದು, ವ್ಯಾಸಂಗ ಮಾಡಿದ್ದಾರೆ. ಪಿಯುಸಿಯಲ್ಲಿ ಅವರು 587 ಅಂಕಗಳನ್ನು ಪಡೆದಿದ್ದರು. ಮಗಳ ರಿಸಲ್ಟ್ ಕಂಡು ತುಂಬಾ ಖುಶಿಯಾಗಿದೆ. ನಮ್ಮೂರಿನ ಹಲವು ವಿದ್ಯಾರ್ಥಿಗಳು ಎಕ್ಸ್‌ ಪರ್ಟ್‌ ನಲ್ಲಿ ವ್ಯಾಸಂಗ ಮಾಡಿರುವ ಕಾರಣ, ನನ್ನ ಮಗಳನ್ನೂ ಅಲ್ಲಿಗೇ ಹಾಕಿದ್ದೇನೆ ಎಂದು ವೈಶ್ವಿ‌ ಅವರ ತಂದೆ ಜಗದೀಶ್‌ ಅಭಿಪ್ರಾಯ ಪಟ್ಟಿದ್ದಾರೆ. 

ಪಶುವೈದ್ಯಕೀಯದಲ್ಲಿ ನಾಲ್ಕನೇ ರ್‍ಯಾಂಕ್‌ ಬಂದಿದ್ದರೂ ವೈಶ್ವಿ‌ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಅದರ ಫ‌ಲಿತಾಂಶದ ಆಧಾರದಲ್ಲಿ ಮುಂದುವರಿಯುವ ಆಶಯ ವ್ಯಕ್ತಪಡಿಸಿದ್ದಾರೆ. ಮೊದಲ ರ್‍ಯಾಂಕ್‌ ವಿಜೇತ ವಿನೀತ್‌ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮಂಗಳೂರಿನಲ್ಲಿ ಮಾಡದೇ ಇರುವುದರಿಂದ ವೈಶ್ವಿ‌ ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವಂತಾಗಿದೆ.

ಸಿಇಟಿ ಫಲಿತಾಂಶ ನೋಡಿ ಸಂತೋಷದ ಜತೆಗೆ ಶಾಕ್‌ ಕೂಡ ಆಗಿದೆ. ಯಾಕೆಂದರೆ ನಾನು ಇಷ್ಟು ಉತ್ತಮ ರ್‍ಯಾಂಕ್‌ ನಿರೀಕ್ಷೆ ಮಾಡಿರಲಿಲ್ಲ. ಪ್ರಸ್ತುತ ನೀಟ್‌ ಪರೀಕ್ಷೆಯನ್ನು ಬರೆದಿದ್ದು, ಅದರ ಫಲಿತಾಂಶದ ಆಧಾರದಲ್ಲಿ ಮುಂದಿನ ಗುರಿ ನಿರ್ಧರಿಸುತ್ತೇನೆ. ಎಕ್ಸ್‌ಪರ್ಟ್‌ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದ ಕಾರಣ ಅವರ ಮಾರ್ಗದರ್ಶನದಂತೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದೇನೆ. ನನ್ನ ಸಾಧನೆಗೆ ನನ್ನ ಕುಟುಂಬ ಹಾಗೂ 
ಎಕ್ಸ್‌ಪರ್ಟ್‌ ಬಳಗವೇ ಕಾರಣ.

– ವೈಶ್ವಿ‌ ಪಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next