Advertisement
ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ವ್ಯವಸ್ಥೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿಸಲು ಬೇಕಾದ ಸಾಫ್ಟ್ವೇರ್ ತಯಾರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. 2018ರ ಏಪ್ರಿಲ್‌ನಲ್ಲಿ ಸಿಇಟಿ ನಡೆಯಲಿದ್ದು, ಇದಾದ ನಂತರದ ಎಲ್ಲಾ ಪ್ರಕ್ರಿಯೆಯನ್ನ ವಿದ್ಯಾರ್ಥಿಗಳು ಮೊಬೈಲ್ ಮೂಲಕವೇ ಮಾಡಬಹುದಾಗಿದೆ.
Related Articles
Advertisement
ಸಾಫ್ಟ್ವೇರ್ ಬದಲಾವಣೆ:ಸಿಇಟಿ ಸಾಫ್ಟ್ವೇರ್ ಬದಲಾಯಿಸುವ ಕಾರ್ಯ ಆರಂಭವಾಗಿದೆ. ಕೆಇಎ ಕಾರ್ಯನಿರ್ವಹಕ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕೂಡ ನಡೆದಿದೆ. ಹೊಸ ಸಾಫ್ಟ್ವೇರ ರಚನೆಯ ಜವಾಬ್ದಾರಿಯನ್ನು ಎನ್‌ಐಸಿಗೆ ವಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾಹಿತಿ ಸುಲಭದಲ್ಲಿ ಸಿಗುವು ಮತ್ತು ಅತ್ಯಂತ ಸರಳ ವಿಧಾನದಲ್ಲಿ ಮಾಹಿತಿ ಅಪ್‌ಲೋಡ್ ಮಾಡಬಹುದಾದ, ತಾಂತ್ರಿಕತೆಯೂ ಚೆನ್ನಾಗಿರುವ ಸಾಫ್ಟ್ವೇರ್ ರಚನೆಯಾಗುತ್ತಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಮೊಬೈಲ್ ಲಿಂಕ್:
ಹೊಸ ಸಾಫ್ಟ್ವೇರ್‌ಗೆ ಮೊಬೈಲ್ ಲಿಂಕ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಿಇಟಿಯ ಎಲ್ಲಾ ಪ್ರಕ್ರಿಯೆಯನ್ನು ತಮ್ಮಲ್ಲಿರುವ ಮೊಬೈಲ್ ಮೂಲಕವೇ ಪೂರೈಸಬಹುದು. ವೃತ್ತಿಪರ ಕೋರ್ಸ್‌ಗಳ ಆನ್‌ಲೈನ್ ನೋಂದಣಿ, ಆಪ್ಶನ್ ಎಂಟ್ರಿ, ಅರ್ಜಿ ತಿದ್ದುಪಡಿ, ಶುಲ್ಕ ಪಾವತಿ ಕೂಡ ಮೊಬೈಲ್‌ನಲ್ಲೇ ಮಾಡಬಹುದು ಮತ್ತು ಸೀಟು ಹಂಚಿಕೆಯ ಫಲಿತಾಂಶವನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು. ಲಾಗಿನ್ ಐಡಿಯಲ್ಲೂ ಕೆಲವೊಂದು ಬದಲಾವಣೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಲ್ಲಿ ಅಥವಾ ಅವರ ಪಾಲಕ, ಪೋಷಕರಲ್ಲಿ ಮೊಬೈಲ್ ಫೋನ್ ಇರುವುದರಿಂದ ಸಿಇಟಿ ಪ್ರಕ್ರಿಯೆ ಮುಂದಿನ ವರ್ಷದಿಂದ ಸುಲಭವಾಗಲಿದೆ. ಸರ್ವರ್ ಸಮಸ್ಯೆ ಬಾರದ ರೀತಿಯಲ್ಲಿ ಸಾಫ್ಟ್ವೇರ್‌ಗೆ ಮೊಬೈಲ್ ಲಿಂಕ್ ಮಾಡುತ್ತಿದ್ದಾರೆ. ಹೊಸ ಅಭ್ಯರ್ಥಿಗಳು :
ಸಿಇಟಿಗೆ ಪ್ರತಿ ವರ್ಷ ಹೊಸ ಅಭ್ಯರ್ಥಿಗಳು ಬರುವುದರಿಂದ ಯಾವುದೇ ರೀತಿಯ ಸುಧಾರಣೆ ತಂದರೂ, ಒಂದಲ್ಲೊಂದು ತಪ್ಪು ನಡೆಯುತ್ತಲೇ ಇರುತ್ತದೆ. ವಿದ್ಯಾರ್ಥಿಗಳು ಸಿಇಟಿ ಪ್ರಕ್ರಿಯೆಯಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬುದರ ಬಗ್ಗೆ ಪ್ರತಿ ವರ್ಷ ಪ್ರಾಧಿಕಾರದಿಂದಲೇ ಕಾಲೇಜುಗಳಲ್ಲಿ ಮತ್ತು ಪ್ರಾಧಿಕಾರದ ಕಚೇರಿಯಲ್ಲಿ ಒರಿಯಂಟೇಷನ್ ಕಾರ್ಯಕ್ರಮ ನಡೆಸಲಾಗುತ್ತದೆ. ಮಾರ್ಗಸೂಚಿ, ವೇಳಾಪಟ್ಟಿ ಹೊಂದಿರುವ ಬೊÅಷರ್ ಕೂಡ ನೀಡಲಾಗುತ್ತದೆ. ಇಷ್ಟಾದರೂ, ವಿದ್ಯಾರ್ಥಿಗಳು ದಾಖಲೆ ಸಲ್ಲಿಕೆ ಸೇರಿದಂತೆ ವಿವಿಧ ಹಂತದಲ್ಲಿ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಇದನ್ನು ಸರಿಪಡಿಸುವುದೇ ಪ್ರಾಧಿಕಾರದ ಅಧಿಕಾರಿಗಳಿಗೆ ದೊಡ್ಡ ಕಿರಿಕಿರಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪಾಲಕರ ಜತೆ ಕುಳಿತು ಮೊಬೈಲ್‌ನಲ್ಲಿ ಸಾವಕಾಶದಿಂದ ಎಲ್ಲಾ ಪ್ರಕ್ರಿಯೆ ಮುಗಿಸಲು ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದಾರೆ. ಸಿಇಟಿ ಸಾಫ್ಟ್ವೇರ್ ಬದಲಿಸುವ ಕಾರ್ಯ ಪ್ರಗತಿಯಲ್ಲಿದೆ. ಎನ್‌ಐಸಿಗೆ ಇದನ್ನು ವಹಿಸಲಾಗಿದೆ. ಮೊಬೈಲ್ ಲಿಂಕ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಮತ್ತು ತಪ್ಪುಗಳು ಕಡಿಮೆಯಾಗುವ ನಿರೀಕ್ಷೆ ಇದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೈಬರ್ ಕೆಫೆಗೆ ಅಲೆದಾಡುವುದು ತಪ್ಪಲಿದೆ.
– ಗಂಗಾಧರಯ್ಯ, ಆಡಳಿತಾಧಿಕಾರಿ, ಕೆಇಎ – ರಾಜು ಖಾರ್ವಿ ಕೊಡೇರಿ