Advertisement

ನಿಗದಿಯಂತೆ ನಡೆಯಲಿದೆ ಸಿಇಟಿ ಪರೀಕ್ಷೆ; ಪಿಜಿಸಿಇಟಿ ಹಾಗೂ ಡಿಪ್ಲೊಮಾ ಸಿಇಟಿ ಮುಂದೂಡಿಕೆ

05:33 PM Jul 21, 2020 | keerthan |

ಬೆಂಗಳೂರು: ಇದೇ ತಿಂಗಳ 30-31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. 127 ಸ್ಥಳದ 497 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಎಸ್‌ಒಪಿ ತಂಡಗಳನ್ನು ರಚಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.  ಎರಡು ದಿನಗಳ ಮುಂಚೆಯೇ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ.  ಹೊರಗಡೆ ರಾಜ್ಯದಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಪೋಷಕರಿಗೆ ವಿನಾಯತಿ ನೀಡಲಾಗುತ್ತದೆ ಎಂದರು.

ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆಂಬುಲೆನ್ಸ್ ಸೇರಿ ಎಲ್ಲ ತುರ್ತು ಅಗತ್ಯ ಸೇವೆ ಇರಲಿದೆ ಎಂದ ಅವರು, ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 83 ಕೇಂದ್ರಗಳಿವೆ. ಇಲ್ಲಿ 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಿಇಟಿ ಪರೀಕ್ಷೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್, ದಂತವೈದ್ಯ ಕೋರ್ಸುಗಳ ಅಡ್ಮಿಷನ್ ದಿನಾಂಕವನ್ನೂ ಮುಂದೂಡಲಾಗುತ್ತದೆ. ಯಾವ ವಿದ್ಯಾರ್ಥಿಗಳಿಗೂ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ ಎಂದರು.

ಎಲ್ಲ ವಿವಿಗಳಲ್ಲಿ ಪದವಿಗೆ ದಾಖಲಾತಿ ಆರಂಭವಾಗಿದೆ. ಹೀಗಾಗಿ ಸಿಇಟಿ ಪರೀಕ್ಷೆ ಮುಗಿಸಿದ ಬಳಿಕ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ದಾಖಲಾತಿಗೆ ಕಾಲವಕಾಶ ನೀಡಲಾಗುತ್ತದೆ ಎಂದರು.

Advertisement

ಹೊರರಾಜ್ಯಗಳಿಂದ 1891 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಾರೆ. ಅವರಿಗೆ ಗಡಿ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಹೊರ ದೇಶದಿಂದ 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಒಂದು ತಿಂಗಳ ಹಿಂದೆಯೇ ಅವರಿಗೆ ನೋಟಿಸ್ ಕೊಡಲಾಗಿತ್ತು ಎಂದರು.

ಪಿಜಿಸಿಇಟಿ ಹಾಗೂ ಡಿಪ್ಲೊಮಾ ಸಿಇಟಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆಗಸ್ಟ್ 8-9 ರಂದು ನಿಗದಿಯಾಗಿದ್ದ ಪಿಜಿಸಿಇಟಿ ಪರೀಕ್ಷೆ ಮುಂದೂಡಲಾಗಿದೆ ಎಂದು ಅಶ್ವಥ್ ನಾರಾಯಣ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next