Advertisement
ಮಲ್ಲೇಶ್ವರದ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಘದ ಆವರಣದಲ್ಲಿ ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾಲೋಚನ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ. ಪ್ರವೀಣ್ ಮಾಹಿತಿ ನೀಡಿದರು.
ಎ. 27ರ ಒಳಗೆ ಸೂಕ್ತ ಪರಿಹಾರ ಘೋಷಿಸದಿದ್ದರೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ, ಕೆಇಎಗೆ ಮುತ್ತಿಗೆ ಹಾಗೂ ಕೋರ್ಟ್ ಮೊರೆ ಹೋಗಲಾಗುವುದು. ಶೇ. 25 ಪ್ರತೀ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯೇತರ ಪ್ರಶ್ನೆಗಳು ಬಂದಿರುವುದರಿಂದ, ಇದನ್ನು ಗಂಭೀರವಾಗಿ ಪರಿಗಣಿಸಿ ಸರಕಾರವು ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು. ಈ ಪಠ್ಯೇತರ ಪ್ರಶ್ನೆಗಳ ಹಿಂದೆ ಯಾವುದೋ ಮಾಫಿಯಾದ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಕೆಸಿಇಟಿ-2024ರ ಗೊಂದಲಗಳಿಗೆ ಸೂಕ್ತ ಪರಿಹಾರ ಹುಡುಕಲು ಶೈಕ್ಷಣಿಕ ಕ್ಷೇತ್ರದ ಮೂಲ ಭಾಗಿದಾರರಾದ ವಿದ್ಯಾರ್ಥಿ, ಪೋಷಕರು, ಶಿಕ್ಷಕ, ಆಡಳಿತ ಮಂಡಳಿ ಸೇರಿ ಇತರ ಸಂಘಟನೆಗಳ ಪ್ರಮುಖರ ಸಭೆಯನ್ನು ಬುಧವಾರವೇ ಕರೆಯಬೇಕು. ಈ ಸಭೆಯಲ್ಲಿ ಕರ್ನಾಟಕ ಪರೀûಾ ಪ್ರಾಧಿಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಪರೀûಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಉನ್ನತ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಬೇಕು. ಎಲ್ಲ ಗೊಂದಲಗಳಿಗೆ ಕಾರಣವಾಗಿರುವ ಕೆಇಎ ನಿರ್ದೇಶಕಿ ಎಸ್. ರಮ್ಯಾ ಅವರನ್ನು ಅಮಾನತಿನಲ್ಲಿಟ್ಟು ಮುಂದಿನ ಎಲ್ಲ ಕ್ರಮಗಳನ್ನು ಜರುಗಿಸಬೇಕು ಎಂದು ಸಮಾಲೋಚನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ ಎಂದು ಎಚ್.ಕೆ. ಪ್ರವೀಣ್ ತಿಳಿಸಿದ್ದಾರೆ.