ಬೆಂಗಳೂರು: ಸಿಇಟಿ-2022ರ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆಯು ಇಂದಿನಿಂದ (ಆ.22) ಆರಂಭವಾಗಲಿದೆ. ಮೊದಲ ದಿನ ರ್‍ಯಾಂಕ್ 1ರಿಂದ 5 ಸಾವಿರ ವರೆಗೆ ಆನ್‌ಲೈನ್ ಮೂಲಕ ನಡೆಸಲಿದೆ.
ಮೀಸಲಾತಿ ಪಡೆಯುವ ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಬೇಕಿದೆ.
ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿಯ ಪ್ರಮಾಣ ಪತ್ರವನ್ನು ಪರಿಶೀಲನೆಗೆ ಒಳಪಡಿಸಬೇಕು. ಆ ನಂತರ ಬಿಇಒ ಇದನ್ನು ದೃಢೀಕರಿಸಿ ಕೆಇಎಗೆ ಅಪ್‌ಲೋಡ್ ಮಾಡಲಿದ್ದಾರೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ತಿಳಿಸಿದೆ.
ಸೆ.7ರವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಇಎ ಕಚೇರಿಯಲ್ಲೇ ಪರಿಶೀಲನೆಗೆ ಅವಕಾಶ ನೀಡಿದೆ.
ವಿದ್ಯಾರ್ಥಿಗಳು ನೇರವಾಗಿ ಇಲ್ಲಿ ಬಂದು ಪರಿಶೀಲನೆಗೆ ಒಳಪಡಬಹುದಾಗಿದೆ. ಬೆಂಗಳೂರಿನಲ್ಲಿಯೇ ಸುಮಾರು 40 ಸಾವಿರ ವಿದ್ಯಾರ್ಥಿಗಳಿದ್ದಾರೆಂಬ ಮಾಹಿತಿಯಿದೆ.