Advertisement

ಸೆಸ್ಕ್ ಸಭೆಯಲ್ಲಿ ವಿದ್ಯುತ್‌ ಸಮಸ್ಯೆಗಳ ಸುರಿಮಳೆ

12:43 PM Jun 10, 2018 | Team Udayavani |

ಹುಣಸೂರು: ತಮ್ಮ ಗ್ರಾಮದಲ್ಲಿ ನಿರಂತರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹಗಲಿಡೀ ವಿದ್ಯುತ್‌ ಇದ್ದರೆ ರಾತ್ರಿಯಿಡೀ ಕಡಿತವಾಗುತ್ತದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಕಾಟದಿಂದ ಜೀವಭಯದಿಂದ ಬದುಕಬೇಕಿದೆ ಎಂದು ಸೆಸ್ಕ್ ಎಇಇ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿದ್ಯುತ್‌ ಗ್ರಾಹಕರ ಸಂಪರ್ಕ ಸಭೆಯಲ್ಲಿ ಸ್ಥಳೀಯರು ಅವಲತ್ತುಕೊಂಡರು.

Advertisement

ಹನಗೋಡು ಹೋಬಳಿ ಕೂಡೂರು ಗ್ರಾಮದ ರಾಜೇಂದ್ರ, ಕಿರಂಗೂರು ಗ್ರಾಮದ ಪ್ರದೀಪ್‌, ಮಾದಳ್ಳಿ ಗ್ರಾಮದ ಶಿವು, ವದ್ಲಿಮನುಗನಹಳ್ಳಿಯ ರಮೇಶ್‌ ಮತ್ತಿತರರು ಸಮಸ್ಯೆಗಳ ಸುರಿಮಳೆ ಸುರಿಸಿದರು. 

ಮಾದಳ್ಳಿಯ ಶಿವು ಹಲವು ಬಾರಿ ಮನವಿ ಮಾಡಿದ್ದರೂ ಈವೆರೆಗೆ ಕಿರಂಗೂರು ಬಳಿಯ 20 ಮನೆಗಳಿಗೆ ನಿರಂತರ ವಿದ್ಯುತ್‌ ಯೋಜನೆ ಸಿಕ್ಕಿಲ್ಲವೆಂದರೆ, ಕಿರಂಗೂರಿನ ಪ್ರದೀಪ್‌ ಗ್ರಾಮದ ತೋಟದ ಬಳಿಯಿರುವ 7ಕ್ಕೂ ಹೆಚ್ಚು ಮನೆಗಳಿಗೆ ನಿರಂತರ ಯೋಜನೆ ಜಾರಿಗೊಂಡಿಲ್ಲವೆಂದು ಬೇಸರಿಸಿದರು. 

ಸೆಸ್ಕ್ ಇಲಾಖೆ ಮೈಸೂರು ವಿಭಾಗದ ಇಇ ಸೋಮರಾಜು ಸಮಸ್ಯೆ ಆಲಿಸಿ, ನಿರಂತರ ವಿದ್ಯುತ್‌ ಯೋಜನೆ ತಲುಪದ ಮನೆಪಟ್ಟಿ ಮಾಡಿ ಇಲಾಖೆ ನಿಯಮಾನುಸಾರ ಕ್ರಮ ಕೈಗೊಂಡು ವಿದ್ಯುತ್‌ ಪೂರೈಸಲು ಕ್ರಮ ಕೈಗೊಳ್ಳಿ ಎಂದು ಜೆಇ ಗಳಾದ ತ್ಯಾಗರಾಜ್‌, ಶಂಭುಲಿಂಗರಿಗೆ ತಾಕೀತು ಮಾಡಿದರು.

ಹೈಟೆನ್ಷನ್‌ ಲೈನ್‌ ಬದಲಿಸಿ: ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಗೆ ಹೆದ್ದಾರಿ ಬಳಿಯ ಬೆ„ಪಾಸ್‌ ರಸ್ತೆಯಿಂದ ತಿರುಗಡಲು ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಜಾಗದಲ್ಲಿ 11ಕೆವಿ ಹೈಟೆನ್ಷನ್‌ ವಿದ್ಯುತ್‌ ಲೈನ್‌ ಹಾದುಹೋಗಿದೆ. ಕೂಡಲೇ ತೆರವುಗೊಳಿಸಿ ಎಂದು ಸಂಸ್ಥೆಯ ವಿಕ್ಟರ್‌ ಫರ್ನಾಂಡೀಸ್‌ ಕೋರಿದರು. ಇದಕ್ಕೆ ಉತ್ತರಿಸಿದ ಇಇ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. 

Advertisement

ಟಿಸಿ ಸುಟ್ಟು ಹೋಗಿದೆ: ಹರೀನಹಳ್ಳಿಯ ಕುಮಾರಸ್ವಾಮಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗುತ್ತಿಲ್ಲವೆಂದು ದೂರಿದರೆ, ಹಂಚ್ಯಾ ಗ್ರಾಮದ ಮಹಮದ್‌ಷರೀಫ್‌ ಹಿಂದಿನ ಸಭೆಯಲ್ಲಿ ತಮ್ಮ ಗ್ರಾಮದಲ್ಲಿ ಹೆಚ್ಚುವರಿಯಾಗಿ ಇನ್ನೊಂದು ಟಿಸಿ ಅಳವಡಿಸಲು ಕೋರಿದ್ದೆ. ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ, 3 ತಿಂಗಳಾದರೂ ಸಮಸ್ಯೆ ಪರಿಹರಿಸಿಲ್ಲವೆಂದರು.

 ನಾಗನಹಳ್ಳಿಯ ಸುರೇಶ್‌ ತಮ್ಮ ಗ್ರಾಮದ ಟಿಸಿಗೆ 20ಕ್ಕೂ ಹೆಚ್ಚು ರೈತರು ಸಂಪರ್ಕ ಪಡೆದಿದ್ದಾರೆ. ವರ್ಷದಲ್ಲಿ 10ಬಾರಿ ಟಿಸಿ ಸುಟ್ಟು ಹೋಗುತ್ತಿದೆ, ಅಂಗಟಹಳ್ಳಿ ಪ್ರಸನ್ನಕುಮಾರ್‌ ತಮ್ಮ ಗ್ರಾಮದಲ್ಲಿರುವ ಟಿಸಿಗೆ 22 ಮಂದಿ ಸಂಪರ್ಕ ಪಡೆದಿದ್ದಾರೆ. ಎಲ್ಲರಿಗೂ  ಗುಣಮಟ್ಟದ ವಿದ್ಯುತ್‌ ಸಿಗುತ್ತಿಲ್ಲವೆಂದು ದೂರಿದರು. 

ಇದಕ್ಕೆ ಉತ್ತರಿಸಿದ ಇಇ, ಟಿಸಿಗಳ ಹೆಚ್ಚುವರಿ ಅಳವಡಿಕೆ ಅವಶ್ಯಕವಿರುವೆಡೆ ಇಲಾಖೆ ಅಧಿಕಾರಿಗಳು ಶೀಘ್ರ ಪರಿಶೀಲನೆ ನಡೆಸಿ ಅಗತ್ಯವಿರುವ ಕಡೆ ಅಳವಡಿಸುವ ಕಾರ್ಯ ಮಾಡಲಿದ್ದಾರೆ. ಒಂದು ಟಿಸಿಯಲ್ಲಿ ಅನಧಿಕೃತ ಸಂಪರ್ಕ ಪಡೆದಿರುವ ರೈತರು ಕೂಡಲೇ ನೋಂದಾಯಿಸಿ ಸಕ್ರಮಗೊಳಿಸಿಕೊಳ್ಳದಿದ್ದರೆ ಅಲ್ಲಿ ಹೆಚ್ಚುವರಿ ಟಿಸಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹುಣಸೂರು ಉಪವಿಭಾಗದ ಎಇಇ ಮಹದೇವಯ್ಯ, ಪ್ರಭಾರ ಅರ್ಕೇಶ್‌ಮೂರ್ತಿ, ಜೆಇಗಳಾದ ಚನ್ನಕೇಶವ, ಪುರುಷೋತ್ತಮ, ತಾಂತ್ರಿಕ ಎಇ ಶಿವಪ್ರಸಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next