Advertisement

ತಾಲೂಕು ಕೇಂದ್ರಗಳಲ್ಲಿ ಜೀವಿತ ಪ್ರಮಾಣ ಪತ್ರ

10:07 AM Jun 19, 2018 | Team Udayavani |

ಮಂಗಳೂರು : ಡಿಜಿಟಲ್‌ ಜೀವಿತ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದೆ ಪಿಂಚಣಿ ದಾರರು ಮಾಸಿಕ ಪಿಂಚಣಿ ಪಡೆಯುವುದರಿಂದ ವಂಚಿತರಾಗುವುದನ್ನು ತಪ್ಪಿಸಲು ಮಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯು ಎಲ್ಲ ತಾಲೂಕು ಕೇಂದ್ರಗಳಲ್ಲಿ ಡಿಜಿಟಲ್‌ ಜೀವಿತ ಪ್ರಮಾಣ ಪತ್ರ ನೀಡುವ ವ್ಯವಸ್ಥೆಗೆ ಮುಂದಾಗಿದೆ. ಈ ಪ್ರಮಾಣ ಪತ್ರವನ್ನು ಬ್ಯಾಂಕ್‌ಗಳು ನೀಡಬೇಕಾಗಿದ್ದರೂ ಈ ಪ್ರಕ್ರಿಯೆಯಲ್ಲಿ ಪಿಂಚಣಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ದಿಶೆಯಲ್ಲಿ ಅದು ಈ ಕ್ರಮಕ್ಕೆ ಮುಂದಾಗಿದೆ.

Advertisement

ಡಿಜಿಟಲ್‌ ಜೀವಿತ ಪ್ರಮಾಣಪತ್ರ ಪಡೆಯಲು ಸಾಧ್ಯವಾಗದೆ ಯಾರೂ ಪಿಂಚಣಿ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ತಾ| ಕೇಂದ್ರಗಳಲ್ಲಿ ಜೀವಿತ ಪ್ರಮಾಣ ಪತ್ರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ಪ್ರಾದೇಶಿಕ ಆಯುಕ್ತ ಮಾರುತಿ ಭೋಯಿ ವಿವರಿಸಿದ್ದಾರೆ. 

ಎಲ್ಲ ಪಿಂಚಣಿದಾರರು ಆಯಾ ವರ್ಷದ ನವೆಂಬರ್‌ ಒಳಗೆ ಡಿಜಿಟಲ್‌ ಜೀವಿತ ಪ್ರಮಾಣ ಪತ್ರವನ್ನು ಬ್ಯಾಂಕ್‌ ಶಾಖೆಯಲ್ಲಿ ಮಾಡಿಸಬೇಕು. ಇದು ಆಗದಿದ್ದರೆ ಭವಿಷ್ಯನಿಧಿ ಕಚೇರಿಗೆ ಬಂದು ಸಲ್ಲಿಸಬೇಕು. ಸಲ್ಲಿಸದಿದ್ದಲ್ಲಿ ಪಿಂಚಣಿ ಪಾವತಿ ಜನವರಿಯಿಂದ ಸ್ಥಗಿತಗೊಳ್ಳುತ್ತದೆ. ಪ್ರಮಾಣ ಪತ್ರ ನೀಡಿದ ಬಳಿಕ ಪಿಂಚಣಿ ಖಾತೆಗೆ ಬರಲಾರಂಭಿಸುತ್ತದೆ. 

ಹೊಸ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳ ಜತೆಗೆ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸುವ ಕೇಂದ್ರಗಳು ನವೆಂಬರ್‌ನಿಂದ ಡಿಜಿಟಲ್‌ ಜೀವಿತ ಪ್ರಮಾಣ ಪತ್ರ ನೀಡಲಿವೆ. ಬ್ಯಾಂಕ್‌ಗಳಿಂದ ಪ್ರಮಾಣಪತ್ರ ಪಡೆಯಲು ಸಾಧ್ಯವಾಗದ ಗ್ರಾಮಾಂತರ ಪ್ರದೇಶಗಳ ಪಿಂಚಣಿದಾರರು ಮಂಗಳೂರು ಕಚೇರಿಗೆ ಬರುವುದು ತಪ್ಪುತ್ತದೆ.

16,696 ಪಿಂಚಣಿ ಖಾತೆಗಳು ಸ್ಥಗಿತ
ಮಂಗಳೂರು ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ವ್ಯಾಪ್ತಿಯಲ್ಲಿ 96,733 ಪಿಂಚಣಿದಾರರಿದ್ದು, ಜೀವಿತ ಪ್ರಮಾಣಪತ್ರ ಸಲ್ಲಿಕೆಯಾಗದೆ 16,696 ಪಿಂಚಣಿ ಖಾತೆಗಳು ಸ್ಥಗಿತಗೊಂಡಿವೆ. ಈ ಖಾತೆಗಳ ವಸ್ತುಸ್ಥಿತಿ, ಯಾಕಾಗಿ ಜೀವಿತ ಪ್ರಮಾಣಪತ್ರ ಸಲ್ಲಿಕೆಯಾಗಿಲ್ಲ ಎಂಬ ಬಗ್ಗೆ ಪರಿಶೀಲಿಸಲು ಕ್ರಮ ಕೈಗೊಂಡಿದೆ.

Advertisement

ಬ್ಯಾಂಕ್‌ಗಳಲ್ಲಿ ಸಮಸ್ಯೆ: ಹಿರಿಯ ಅಧಿಕಾರಿಗಳ ಗಮನಕ್ಕೆ
ಪಿಂಚಣಿ ಖಾತೆ ಇರುವ ಬ್ಯಾಂಕ್‌ಗಳು ಡಿಜಿಟಲ್‌ ಪ್ರಮಾಣಪತ್ರ ಒದಗಿಸಬೇಕು. ಪಿಂಚಣಿ ವಿತರಣೆಗೆ ಭವಿಷ್ಯನಿಧಿ ಇಲಾಖೆ ಬ್ಯಾಂಕ್‌ಗಳಿಗೆ ಕಮಿಷನ್‌ ನೀಡುತ್ತದೆ. ಕೆಲವು ಬ್ಯಾಂಕ್‌ಗಳು ನವೆಂಬರ್‌ ತಿಂಗಳಿನಲ್ಲಿ ಮಾತ್ರ ಜೀವಿತ ಪ್ರಮಾಣಪತ್ರ ಮಾಡಿ, ಬಳಿಕ ಸ್ಥಗಿತಗೊಳಿಸುತ್ತವೆ. ಪಿಂಚಣಿದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕುಗಳ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪಿಎಫ್‌ ಅಧಿಕಾರಿಗಳು ತಿಳಿಸಿದ್ದಾರೆ .

ಮನೆಗೆ ತೆರಳಿ ಪಿಂಚಣಿ-ಚಿಂತನೆ 
ವೃದ್ಧಾಪ್ಯ, ತೀವ್ರ ಅನಾರೋಗ್ಯ ಪೀಡಿತ ಪಿಂಚಣಿದಾರರ ಮನೆಗೆ ಹೋಗಿ ಪಿಂಚಣಿ ನೀಡುವ ಚಿಂತನೆ ಇದೆ. ಈ
ಬಗ್ಗೆ ಇಲಾಖೆಯ ಅನುಮತಿ ಕೋರಿ, ಬ್ಯಾಂಕ್‌ಗಳ ಜತೆ ಸಮಾಲೋಚನೆ ನಡೆಸಿ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಮಾರುತಿ ಭೋಯಿ ತಿಳಿಸಿದ್ದಾರೆ.

ಮಾಸಿಕ ಪಿಂಚಣಿ ಬಹಳಷ್ಟು ಮಂದಿಗೆ ಜೀವನಾಧಾರವಾಗಿದೆ. ಜೀವಿತ ಪ್ರಮಾಣ ಪತ್ರ ಪಡೆಯಲಾಗದೆ ಅವರು ಈ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೆಲವು ಉಪಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದೇವೆ. ಪಿಂಚಣಿದಾರರು ಹೆಚ್ಚು ಇರುವ ಕಡೆಗಳಲ್ಲಿ ಜೀವಿತ ಪ್ರಮಾಣ ಪತ್ರ ನೀಡಿಕೆ ತಾತ್ಕಾಲಿಕ ಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗುವುದು.
-ಮಾರುತಿ ಭೋಯಿ
ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು,
ಮಂಗಳೂರು 

ಅಶಕ್ತರ ಮನೆ ಬಾಗಿಲಿಗೆ ತೆರಳಿ ಸೌಲಭ್ಯ
ದೈಹಿಕವಾಗಿ ಅಶಕ್ತರಾದ ಪಿಂಚಣಿದಾರರ ನಿವಾಸಕ್ಕೆ ತೆರಳಿ ಪ್ರಮಾಣಪತ್ರ ಮಾಡಿಸುವ ಕಾರ್ಯಕ್ರಮವನ್ನು ಭವಿಷ್ಯನಿಧಿ ಕಚೇರಿ ಹಮ್ಮಿಕೊಂಡಿದೆ. ಅಶಕ್ತ ಪಿಂಚಣಿದಾರರು ಮಂಗಳೂರಿನ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿ ಹೆಸರು, ವಾಸ್ತವ್ಯ ವಿಳಾಸ, ಪಿಂಚಣಿ ವಿತರಣೆ ಆದೇಶ ಸಂಖ್ಯೆ, ಬ್ಯಾಂಕ್‌ ಮಾಹಿತಿ ಹಾಗೂ ದೂರವಾಣಿ ಸಂಖ್ಯೆ ಮಾಹಿತಿಗಳೊಂದಿಗೆ ನಿವೇದನೆ ಪತ್ರವನ್ನು ಸಲ್ಲಿಸಿದರೆ ಸಿಬಂದಿ ಅವರ ಮನೆಗೆ ಹೋಗಿ ಜೀವಿತ ಪ್ರಮಾಣ ಪತ್ರ ಮಾಡುತ್ತಾರೆ. 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next