ಹೊಸದಿಲ್ಲಿ: “ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಮಾಧ್ಯಮಗಳು, ಕೆಲವು ಸುದ್ದಿಗಳಿಗೆ ಮತೀಯತೆಯ ರಂಗು ಬಳಿದು ಬಿತ್ತರಿಸುತ್ತಿವೆ. ಸಾಮಾಜಿಕ ಜಾಲತಾಣಗಳು ಅದರಲ್ಲೂ ವಿಶೇಷವಾಗಿ, “ಯು ಟ್ಯೂಬ್’ನಂಥ ಸಾಮಾಜಿಕ ಜಾಲತಾಣಗಳು, ಕೇವಲ ಸುಳ್ಳು ಸುದ್ದಿಗಳನ್ನು ಬಿತ್ತುತ್ತಿದ್ದು, ಕೆಲವೊಮ್ಮೆ ನ್ಯಾಯಮೂರ್ತಿಗಳ ವಿರುದ್ಧವೂ ಅವಹೇಳನಕಾರಿಯಾದ ಬರಹಗಳನ್ನು ಪ್ರಕಟಿಸುತ್ತದೆ” ಎಂದು ವಿಷಾದಿಸಿದೆ.
ಇದರಿಂದ ದೇಶಕ್ಕೆ ಕೆಟ್ಟ ಹೆಸರು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಹೇಳಿದೆ.
ದಿಲ್ಲಿಯ “ಜಮೈತ್ ಉಲೇಮಾ-ಇ-ಹಿಂದ್’ ಸಂಘಟನೆಯ ಮೇಲ್ಮನವಿಯೊಂದರ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಈ ರೀತಿಯ ಖೇದ ವ್ಯಕ್ತಪಡಿಸಿದೆ.
ಕಳೆದ ವರ್ಷ, ಹೊಸದಿಲ್ಲಿಯ ನಿಜಾಮುದ್ದೀನ್ ಮರ್ಕಝ್ನಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶದ ನಂತರದ ದಿನಗಳಲ್ಲಿ ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಮಾಧ್ಯಮಗಳು ಬೇಜವಾಬ್ದಾರಿಯಾಗಿ ಸುದ್ದಿ ಬಿತ್ತರಿಸಿದ್ದವು. ಇಂಥ ಕೆಟ್ಟ ಸಂಸ್ಕೃತಿಗೆ ಕಡಿವಾಣ ಹಾಕಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಕ್ರಮ ಜಾರಿಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಜಮೈತ್ ಉಲೇಮಾ-ಇ- ಹಿಂದ್, ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದು, ಈ ಹಿನ್ನೆಲೆ ಯಲ್ಲಿ ನ್ಯಾಯಪೀಠ ಹೀಗೆ ಹೇಳಿದೆ.