Advertisement

ಎಳನೀರು ಸೌಂದರ್ಯವರ್ಧಕ ರೂಪ

03:45 AM Apr 28, 2017 | |

ಬೇಸಿಗೆಯ ಸಮಯದಲ್ಲಿ ಎಳನೀರು ಅಮೃತದಂತೆ. ಪೋಷಕಾಂಶಗಳ ಆಗರವಾಗಿರುವ ಎಳನೀರು ಎಲ್ಲಾ ಕಾಲದಲ್ಲೂ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಹಿತಕರ.

Advertisement

ನೈಸರ್ಗಿಕವಾಗಿಯೇ ಸುಲಭವಾಗಿ ಎಳನೀರಿನೊಂದಿಗೆ ತಯಾರಿಸಬಹುದಾದ ಸೌಂದರ್ಯವರ್ಧಕ ಪ್ರಯೋಗ, ಉಪಯೋಗಗಳು ಇಲ್ಲಿ ತಿಳಿಸಲಾಗಿದೆ.

ಎಳನೀರಿನ ಸೇವನೆ ಹಾಗೂ ಲೇಪ
ಎಲ್ಲಾ ಕಾಲದಲ್ಲೂ ಅದರಲ್ಲೂ ಬೇಸಿಗೆಯಲ್ಲಿ ಎಳನೀರನ್ನು ಸೇವಿಸಿದರೆ ಉತ್ತಮ ಚರ್ಮದ “ಡಿಟಾಕ್ಸಿಫೈ’ ಪೇಯ. ಚರ್ಮಕ್ಕೆ ತಾಜಾತನ ನೀಡುತ್ತದೆ. ತಾಜಾ ಎಳನೀರಿನಲ್ಲಿ ಹತ್ತಿಯ ಉಂಡೆಗಳನ್ನು ಅದ್ದಿ ಆಗಾಗ್ಗೆ ಮುಖಕ್ಕೆ ಲೇಪಿಸುತ್ತಿದ್ದರೆ ಬೆವರಿನಿಂದ ಬಸವಳಿದು ಕಾಂತಿಹೀನವಾಗುವ ತ್ವಚೆ ತಾಜಾತನ ಪಡೆದು ತೇವಾಂಶದಿಂದ ಕೂಡಿ ಹೊಳಪನ್ನು ಪಡೆದುಕೊಳ್ಳುತ್ತದೆ.

ತಲೆಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಒಂದು ಕಪ್‌ ಎಳನೀರಲ್ಲಿ ಕೂದಲನ್ನು ತೊಳೆದರೆ, ಅಧಿಕ ಬಿಸಿಲು, ತಾಪ ಹಾಗೂ ಪೋಷಕಾಂಶಗಳ ಕೊರತೆಯಿಂದ ಉದುರುವ, ಒಣಗಿ ಕಾಂತಿ ಕಳೆದುಕೊಳ್ಳುವ ಕೂದಲಿಗೆ ಹೊಸ ಚೈತನ್ಯ ದೊರೆತು ಕೂದಲು ಸೊಂಪಾಗಿ ಬೆಳೆಯುತ್ತದೆ.

ಡಿಟಾಕ್ಸಿಫೈ ಪೇಯವಾಗಿ ಬಳಸಲು ನಿತ್ಯ ಬೆಳಿಗ್ಗೆ ಮಧ್ಯಾಹ್ನ ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವಿಸಿದರೆ ಬಹಳ ಉಪಯುಕ್ತ.

Advertisement

ಎಳನೀರಿನ ಮುಖದ ಕ್ಲೆನ್ಸರ್‌
ತಾಜಾ ಎಳನೀರಿಗೆ ಸ್ವಲ್ಪ ನಿಂಬೆರಸ ಬೆರೆಸಿ, ಅದರಲ್ಲಿ ಹತ್ತಿಯ ಉಂಡೆಗಳನ್ನು ಅದ್ದಿ ಮುಖವನ್ನು ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. ಇದು ಮೊಗದ ಚರ್ಮಕ್ಕೆ ಉತ್ತಮ ಕ್ಲೆನ್ಸರ್‌.

ಇದನ್ನು “ಮೇಕಪ್‌ ರಿಮೂವರ್‌’ ರೀತಿಯಲ್ಲಿಯೂ ಬಳಸಬಹುದು. ಫ್ಯಾನ್ಸಿ ಮೇಕಪ್‌ ರಿಮೂವರ್‌ಗಿಂತ ಇದು ಹಿತಕರ. ತದನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಮೇಕಪ್‌ನಿಂದ ಮುಖದ ಚರ್ಮ ಘಾಸಿಯಾಗದಂತೆಯೂ ಇದು ತಡೆಗಟ್ಟುತ್ತದೆ.

ಎಳನೀರಿನ ಬಾಡಿವಾಶ್‌
ಬೇಸಿಗೆಯಲ್ಲಿ ಬೆವರುಸೆಲೆ, ಗುಳ್ಳೆ , ಮೊಡವೆಗಳಿದ್ದಾಗ ಮೈಯಲ್ಲಿ ತುರಿಕೆ ಉಂಟಾದಾಗ ಎಳನೀರಿನ ಈ ಬಾಡಿವಾಶ್‌ ಹಿತಕರ.

ತಯಾರಿಸುವ ವಿಧಾನ: 3 ಕಪ್‌ ಎಳನೀರು, 4 ಚಮಚ ತುಳಸೀ ಎಲೆಯ ರಸ, 4 ಚಮಚ ಶುದ್ಧ ಗುಲಾಬಿಜಲ, 20 ಹನಿ ಶ್ರೀಗಂಧ ತೈಲ ಬೆರೆಸಬೇಕು. ಇದನ್ನು ಮುಖ-ಮೈಗೆ ಲೇಪಿಸಿ 20 ನಿಮಿಷದ ಬಳಿಕ ತೊಳೆಯಬೇಕು. ಇದು ಬೆವರುಸೆಲೆ, ಗುಳ್ಳೆ , ಮೊಡವೆಗಳನ್ನು ನಿವಾರಿಸುತ್ತದೆ.
ಚಿಕ್ಕ‌ ಮಕ್ಕಳಿಗೆ ನಿತ್ಯಸ್ನಾನ ಮಾಡಿಸುವಾಗ ನೀರಿನಲ್ಲಿ  1 ಕಪ್‌ ಎಳನೀರು, 2 ಚಿಟಿಕೆ ಅರಸಿನ ಹುಡಿ ಬೆರೆಸಿ ಸ್ನಾನ ಮಾಡಿಸಿದರೆ ಮಕ್ಕಳ ಚರ್ಮದಲ್ಲಿ ಉಂಟಾಗುವ ಶಿಲೀಂಧ್ರ ಸೋಂಕು, ಗುಳ್ಳೆ, ತುರಿಕೆಗಳು, ಕಜ್ಜಿ ಉಂಟಾಗುವುದಿಲ್ಲ. ಜೊತೆಗೆ ಕಲೆಗಳೂ ನಿವಾರಣೆಯಾಗುತ್ತದೆ. ಚರ್ಮ ಕಾಂತಿಯುತವಾಗುತ್ತದೆ.

ಬಿಸಿಲುಗಂದು ನಿವಾರಕ ಎಳನೀರಿನ ಫೇಸ್‌ಪ್ಯಾಕ್‌
ಮುಲ್ತಾನಿ ಮಿಟ್ಟಿ 2 ಚಮಚ ತೆಗೆದುಕೊಂಡು ಅದಕ್ಕೆ ತಾಜಾ ಎಳನೀರು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತೊಳೆದರೆ ಬಿಸಿಲುಗಂದು ನಿವಾರಣೆಯಾಗುತ್ತದೆ.

ಮೊಡವೆ ಕಲೆ ನಿವಾರಕ ಎಳನೀರಿನ ಫೇಸ್‌ಪ್ಯಾಕ್‌
ಎಳನೀರು 1/4 ಕಪ್‌ ತೆಗೆದುಕೊಂಡು ಅದಕ್ಕೆ ಚೆನ್ನಾಗಿ ಅರೆದು  ಪೇಸ್ಟ್‌ ತಯಾರಿಸಿದ ಟೊಮ್ಯಾಟೋ ತಿರುಳು 2 ಚಮಚ ಬೆರೆಸಬೇಕು. ಇದನ್ನು ಮೊಡವೆ ಮತ್ತು ಕಲೆ ಇರುವ ಭಾಗದಲ್ಲಿ ಲೇಪಿಸಬೇಕು. ಅರ್ಧ ಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದರೆ ಮೊಡವೆ ಹಾಗೂ ಮೊಡವೆಯ ಕಲೆಗಳು ನಿವಾರಣೆಯಾಗಿ ಮುಖ ಹೊಳೆಯುತ್ತದೆ.

– ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next