ಮಂಗಳೂರು: ಸಹಕಾರ ಕ್ಷೇತ್ರ ಪವಿತ್ರವಾದ ಕ್ಷೇತ್ರ. ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳು ಸಹಕಾರ ಸಂಸ್ಥೆಗಳ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಾರೆ. ಸಂಸ್ಥೆಗಳ ಯಶಸ್ಸಿನ ಹಿಂದೆ ಅ ಧಿಕಾರಿ ವರ್ಗ ಹಾಗೂ ಸಿಬಂದಿ ಪಾತ್ರ ಮಹತ್ವದ್ದು. ಹಾಗಾಗಿ ಎಲ್ಲರೂ ಸಹಕಾರ ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ನಗರದ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವತಿಯಿಂದ ಏರ್ಪಡಿಸಲಾದ ಅಭಿನಂದನ ಕಾರ್ಯಕ್ರಮದಲ್ಲಿ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನಿವೃತ್ತ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಾದ ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರ ಸಂಘದ ಉಮಾನಾಥ್ ಶೆಟ್ಟಿಗಾರ್ ಮತ್ತು ಪದವು ವ್ಯವಸಾಯ ಸೇವಾ ಸಹಕಾರ ಸಂಘದ ಉಮೇಶ್ ಅವರನ್ನು ಸಮ್ಮಾನಿಸಲಾಯಿತು.
ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಕೆ.ಎಸ್. ದೇವರಾಜ್, ಶಶಿಕುಮಾರ್ ರೈ ಬಾಲೊಟ್ಟು, ಬೆಳಪು ದೇವಿಪ್ರಸಾದ್ ಶೆಟ್ಟಿ, ಬ್ಯಾಂಕಿನ ಸಿಇಒ ಸತೀಶ್ ಎಸ್., ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ್ ಸಿಂಗ್, ಕಾವೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹರಿಶ್ಚಂದ್ರ ಉಪಸ್ಥಿತರಿದ್ದರು.
ಮೂಡಬಿದಿರೆ ವ್ಯವಸಾಯ ಸೇವಾ ಸಹಕಾರ ಸಂಘದ ಸಿಇಒ ಚಂದ್ರಶೇಖರ್ ಮತ್ತು ನಾಗುರಿ ವ್ಯವಸಾಯ ಸೇವಾ ಸಹಕಾರ ಸಂಘದ ಸಿಇಒ ಮೋಹನ್ ದಾಸ್ ಅವರು ಪ್ರಸ್ತಾವನೆಗೈದರು.
ಬಜಪೆ ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತ್ನಾಕರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ನೀರುಮಾರ್ಗ ವ್ಯವಸಾಯ ಸೇವಾ ಸಹಕಾರ ಸಂಘದ ಸಿಇಒ ಉದಯ ಕುಮಾರ್ ವಂದಿಸಿದರು.