ಹಾನಗಲ್ಲ: ಜಿಪಂ ಸಿಇಒ ಕೆ.ಲೀಲಾವತಿ ತಾಲೂಕಿನ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಮೂಲ ಸೌಕರ್ಯ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಸೂಚಿಸಿದರು.
ಗುರುವಾರ ಬೆಳಗ್ಗೆ ತಾಲೂಕಿನ ಅಕ್ಕಿಆಲೂರು ಎನ್‌ಡಿಎಚ್ಎಸ್ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷಾ ಚಟುವಟಿಕೆಗಳನ್ನು ಪರಿಶೀಲಿಸಿದರು.
ಗೆಜ್ಜಿಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಆಹಾರ ಸಾಮಗ್ರಿ, ಅಡುಗೆಕೋಣೆ ಸ್ವಚ್ಛತೆ ಪರಿಶೀಲಿಸಿದರು. ನಂತರ ಹಾನಗಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿದರು. ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಬಗ್ಗೆ ವಿವರ ಪಡೆದರು. ಆಸ್ಪತ್ರೆಯಲ್ಲಿ ಡಿ-ದರ್ಜೆಯ ನೌಕರರ ಅವಶ್ಯಕತೆಯಿದ್ದು, ಇದರಿಂದಾಗಿ ಸ್ವಚ್ಛತೆ ಕಾಪಾಡಲು ಸಮಸ್ಯೆಯಾಗುತ್ತಿರುವುದನ್ನು ಗಮನಿಸಿ, ಕೂಡಲೇ ಡಿ ದರ್ಜೆ ನೌಕರರನ್ನು ನೇಮಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಇಒ, ವೈದ್ಯರ ಕೊರತೆ ನಿವಾರಣೆಗಾಗಿ ಪ್ರತಿ ಸೋಮವಾರ ಜಿಲ್ಲಾಧಿಕಾರಿಗಳು ನೇಮಕಾತಿಗಾಗಿ ಸಂದರ್ಶನ ಕೈಗೊಳ್ಳುತ್ತಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ. ಆಯುಷ್ ವೈದ್ಯರ ಸೇವೆಯನ್ನೂ ಪಡೆದುಕೊಳಲಾಗುತ್ತಿದೆ. ಜಿಲ್ಲಾ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚುವರಿಯಾಗಿರುವ ಪ್ಯಾರಾ ಮೆಡಿಕಲ್ ಸಿಬ್ಬಂದಿ ಒದಗಿಸಲು ಸೂಚಿಸಲಾಗುವುದು. ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಅವುಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸ ಕಟ್ಟಡ ಮಂಜೂರಾತಿ ದೊರೆತಿವೆ. ಒಂದು ವರ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿವೆ. ಮಾತೃಪೂರ್ಣ ಯೋಜನೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಮಹಿಳೆಯರು ಅಂಗನವಾಡಿ ಕೇಂದ್ರಗಳಿಗೆ ಬರಲು ಮುಜುಗರ ಪಡುತ್ತಿದ್ದಾರೆ. ಹೀಗಾಗಿ ಊಟವನ್ನು ಮನೆಗಳಿಗೇ ಕೊಂಡೊಯ್ಯುತ್ತಿದ್ದಾರೆ ಎಂದು ವಿವರಿಸಿದರು.
ನಂತರ ಪಟ್ಟಣದ ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ತೆರಳಿ ಮಕ್ಕಳೊಂದಿಗೆ ಚರ್ಚಿಸಿದರು. ವಿದ್ಯಾರ್ಥಿಗಳ ಹಾಜರಾತಿ ಹಾಗೂ ವಸತಿ ವ್ಯವಸ್ಥೆ, ಕುಡಿಯುವ ನೀರು, ಅಡುಗೆ ಕೋಣೆ ವೀಕ್ಷಿಸಿ, ಮಕ್ಕಳಿಗೆ ಪೌಷ್ಟಿಕ ಆಹಾರ ನಿಗದಿತ ವೇಳೆ ನೀಡುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು.