ಲಂಡನ್: ಅಪ್ಪ- ಅಮ್ಮನ ಆಶ್ರಯದಲ್ಲಿ ಬೆಳೆದು ಬದುಕು ಕಟ್ಟಿಕೊಳ್ಳುವ ಮಕ್ಕಳು ಒಂದೊಳ್ಳೆ ಸ್ಥಾನಗಳಿಗೆ ಬಂದ ಮೇಲೆ ಅದೇ ಹೆತ್ತವರನ್ನು ಫುಟ್‌ಪಾತ್‌ಗೆ ಅಟ್ಟಿರುವ ಅನೇಕ ಪ್ರಸಂಗಗಳಿವೆ.
ಆದರೆ, ಲಂಡನ್‌ನ ಕಂಪನಿಯ ಉನ್ನತಾಧಿಕಾರಿ ಇಳಿ ವಯಸ್ಸಿನ ತಮ್ಮ ಅಪ್ಪ- ಅಮ್ಮನ ಜತೆಗೆ ಇರಬೇಕೆಂಬ ಉದ್ದೇಶದಿಂದಲೇ ವಾರ್ಷಿಕವಾಗಿ ಸುಮಾರು 17 ಕೋಟಿ ರೂ. ಸಂಬಳವಿರುವ ತಮ್ಮ ಹುದ್ದೆಯನ್ನು ತೊರೆದಿದ್ದಾರೆ!
ಇಂಥದ್ದೊಂದು ನಿರ್ಧಾರ ಕೈಗೊಳ್ಳುವ ಮೂಲಕ ಲಂಡನ್‌ನ ಜ್ಯೂಪಿಟರ್ ಫಂಡ್ ಮ್ಯಾನೇಜ್ಮೆಂಟ್ ಎಂಬ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ (ಸಿಇಒ)
ಆಂಡ್ರ್ಯೂ ಫಾರ್ಮಿಕಾ ಈಗ ಸುದ್ದಿಯಾಗಿದ್ದಾರೆ! ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿಯಾಗಿದ್ದು, ಅ. 1ರಂದು ತಾವು ಕಂಪನಿ ಬಿಡುವುದಾಗಿ ತಿಳಿಸಿದ್ದಾರೆ.
ತಮ್ಮ ಅಪ್ಪ-ಅಮ್ಮನ ಜತೆಗೆ ಕಾಲಕಳೆಯಲು, ಸಮುದ್ರದ ದಂಡೆಗಳಲ್ಲಿ ನಿಶ್ಚಿಂತೆಯಿಂದ ಇರಲು ತೀರ್ಮಾನಿಸಿ ಕೆಲಸ ಬಿಡುತ್ತಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. 2019ರಲ್ಲಿ ಜ್ಯೂಪಿಟರ್ ಕಂಪನಿಯ ಸಿ.ಇ.ಒ. ಆಗಿ ನೇಮಕಗೊಂಡಿದ್ದ ಅವರಿಗೆ ಕಂಪನಿಯು ಇಲ್ಲಿಯವರೆಗೆ 53 ಕೋಟಿ ರೂ.ಗಳನ್ನು (ವರ್ಷಕ್ಕೆ ಸರಾಸರಿ 17.66 ಕೋಟಿ ರೂ.) ವೇತನ ರೂಪದಲ್ಲಿ ನೀಡಿದೆ.