Advertisement

ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕೆ ಸಿಇಒ ಸೂಚನೆ

09:35 AM Mar 01, 2019 | Team Udayavani |

ಯಾದಗಿರಿ: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003(ಕೊಟಾ-2003) ಕಾಯ್ದೆ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕೆ ತರಬೇಕು ಎಂದು ಜಿಪಂ ಸಿಇಒ ಕವಿತಾ ಎಸ್‌.ಮನ್ನಿಕೇರಿ ಸೂಚಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ತಂಬಾಕು ನಿಯಂತ್ರಣ ಕೋಶದ ಸದಸ್ಯರು ತಂಬಾಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ತೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಾಮಫಲಕ ಅಳವಡಿಸಿ: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಬರುವ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ಕಡ್ಡಾಯವಾಗಿ ಸೆಕ್ಷನ್‌ -4 ಮತ್ತು 6(ಬಿ) ಅಡಿಯಲ್ಲಿ ನಾಮಫಲಕ ಅಳವಡಿಸಬೇಕು. ಸೆಕ್ಷನ್‌ 6(ಎ) ಪ್ರಕಾರ 18 ವರ್ಷದೊಳಗಿನ ಮಕ್ಕಳು ತಂಬಾಕು ಉತ್ಪನ್ನದ
ವಸ್ತು ಸೇವಿಸುವಂತಿಲ್ಲ. 6(2)ಎ ಪ್ರಕಾರ ಮಕ್ಕಳಿಗೆ ತಂಬಾಕು ಉತ್ಪನ್ನ ಕಾಣುವಂತೆ ಪ್ರದರ್ಶಿಸಬಾರದು ಎಂದು ಸೂಚಿಸುವ ಜಾಹೀರಾತು ನಾಮಫಲಕ ಅಳವಡಿಸಬೇಕು ಎಂದು ತಿಳಿಸಿದರು.

ಎಲ್ಲ ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳಲ್ಲಿ ಸೆಕ್ಷನ್‌-4ರ ಪ್ರಕಾರ ಬೋರ್ಡ್‌ ಅಳವಡಿಸಬೇಕು. ನಗರಸಭೆ ಅಧಿಧೀನದಲ್ಲಿನ ಅಂಗಡಿ, ಹೋಟೆಲ್‌, ಪಾನ್‌ಶಾಪ್‌ಗ್ಳಲ್ಲಿ ಸೆಕ್ಷನ್‌ -4ರ ಪ್ರಕಾರ ಸಾರ್ವಜನಿಕರಿಗೆ ಕಾಣುವಂತೆ ಬೋರ್ಡ್‌ ಅಳವಡಿಸಬೇಕು. ಬಿಡಿಬಿಡಿಯಾಗಿ ಮಾರಾಟವಾಗುವ ತಂಬಾಕು ಪದಾರ್ಥ ವಶಕ್ಕೆ ಪಡೆದು ಮಾರಾಟಗಾರರಿಂದ ದಂಡ ವಸೂಲಿ ಮಾಡಬೇಕು ಎಂದು ನಿರ್ದೇಶಿಸಿದರು.

ಸೆಕ್ಷನ್‌ 5ರ ಪ್ರಕಾರ ತಂಬಾಕು ಉತ್ಪನ್ನ ಸೇವಿಸಲು ಪ್ರೋತ್ಸಾಹಿಸುವಂತಹ ಜಾಹೀರಾತು ಫಲಕ ನಗರಸಭೆ ವ್ಯಾಪ್ತಿಯ ಅಂಗಡಿ, ಹೋಟೆಲ್‌, ಪಾನ್‌ಶಾಪ್‌ಗ್ಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವಂತಿಲ್ಲ ಎಂದು ಹೇಳಿದರು. 

Advertisement

ಪ್ರಚೋದನಾತ್ಮಕ ಜಾಹೀರಾತು ಫಲಕ ನಿಷೇಧ: ಸೆಕ್ಷನ್‌ 6ರ ಪ್ರಕಾರ ಯಾವುದೇ ಸರ್ಕಾರಿ ಹಾಗೂ ಸರ್ಕಾರೇತರ ಶಾಲೆಗಳ 100 ಮೀಟರ್‌ ವ್ಯಾಪ್ತಿಯ ಪ್ರದೇಶದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು ಮತ್ತು ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದನೆ ನೀಡುವ ಜಾಹೀರಾತು ಫಲಕ ಪ್ರದರ್ಶಿಸುವಂತಿಲ್ಲ ಎಂದು ಮಾಹಿತಿ ನೀಡಿದರು.

ಸಿಗರೇಟ್‌ ಉತ್ಪನ್ನದ ಮೇಲೆ ಶೇ.80 ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಜಾಹೀರಾತು ನೀಡಿದ್ದರೂ ಸಿಗರೇಟ್‌, ತಂಬಾಕು ಉತ್ಪನ್ನ ವಸ್ತುಗಳ ಸೇವನೆಯಿಂದ ಇಂದು ಪ್ರತಿ 8 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಮರಣ ಹೊಂದುತ್ತಿದ್ದಾರೆ ಎಂದು ವಿಷಾದಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಹಬೀಬ್‌ ಉಸ್ಮಾನ್‌ ಪಟೇಲ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಿವೇಕಾನಂದ ಟೆಂಗೆ, ಯಾದಗಿರಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಶಹಾಪುರ ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಸುರಪುರ ತಾಲೂಕು ಆರೋಗ್ಯಾಧಿಕಾರಿ ಡಾ| ಆರ್‌.ವಿ. ನಾಯಕ್‌, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ್‌, ಸಂಗೀತಾ ಪಾಟೀಲ್‌, ಆಪ್ತ ಸಮಾಲೋಚಕರಾದ ನಟರಾಜ್‌, ಸಾಮಾಜಿಕ ಕಾರ್ಯಕರ್ತ ಮಾಸ್ಟರ್‌ ಫಿಲಿಪ್‌, ಕಿರಿಯ ಆರೋಗ್ಯ ನಿರೀಕ್ಷಕ ಸುರೇಶ, ಸುರಪುರ ಪಿಎಸ್‌ಐ ರಾಜಕುಮಾರ್‌ ಡಿ.ಜಾಮಗೊಂಡ, ಪ್ರದೀಪ್‌ ಎಸ್‌.ಭೀಸೆ, ಅಬಕಾರಿ ಇನ್‌ಸ್ಪೆಕ್ಟರ್‌ ಪ್ರಕಾಶ್‌ ಇತರರಿದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಸೇವಿಸುವ ವ್ಯಕ್ತಿಗಳ ವಿರುದ್ಧ ಸೆಕ್ಷನ್‌ 21ರ ಪ್ರಕಾರ 200 ರೂ. ದಂಡ ವಿಧಿಸಲು ಅವಕಾಶ ಇದೆ. ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಮುಕ್ತ ಪ್ರದೇಶ ನಿರ್ಮಾಣ ಮಾಡಲು ಅಲ್ಲಿನ ಅಧಿಕಾರಿ-ಸಿಬ್ಬಂದಿ ಮನಸ್ಸು ಮಾಡಬೇಕು. ತಂಬಾಕು ಚಟಕ್ಕೆ ಅಂಟಿಕೊಂಡವರನ್ನು ಗುರುತಿಸಿ, ಕೌನ್ಸೆಲಿಂಗ್‌ ಮಾಡುವ ಮೂಲಕ ಅವರನ್ನು ಚಟದಿಂದ ಮುಕ್ತರನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ ವಿನಃ ದಂಡ ವಿಧಿಸುವ ಉದ್ದೇಶವಿಲ್ಲ. 
ಕವಿತಾ ಎಸ್‌.ಮನ್ನಿಕೇರಿ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next