ಆಳಂದ: ತಾಲೂಕಿನ ಕಡಗಂಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಬದೋಲೆ ಭೇಟಿ ನೀಡಿ, ವೈದ್ಯಾಧಿಕಾರಿಗಳು ಹಾಜರಿರದೇ ಇರುವುದಕ್ಕೆ ಹಾಗೂ ಅಶಿಸ್ತು ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆ ವಾರ್ಡ್, ಹೆರಿಗೆ ಕೋಣೆ, ಶಸ್ತ್ರ ಚಿಕಿತ್ಸಾ ಕೊಠಡಿ ವೀಕ್ಷಿಸಿದರು. ಈ ವೇಳೆ ಆಸ್ಪತ್ರೆಯ ಚಿಕಿತ್ಸಾ ಕೊಠಡಿಯಲ್ಲಿದ್ದ ಅನುಪಯುಕ್ತ ವಸ್ತುಗಳನ್ನು ಕಂಡು ಆರೋಗ್ಯ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ತರಾಟೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ ಹೊರರೋಗಿಗಳು ವೈದ್ಯರಿಗಾಗಿ ಕಾಯುತ್ತಿದ್ದಾರೆ. ಅವರು ಇನ್ನೂ ಬಂದಿಲ್ಲ. ಅವರ ಸಂಬಳದಲ್ಲೇ ಆಸ್ಪತ್ರೆಯಲ್ಲಿ ಉಪಯೋಗಿಸದೇ ಇರುವ ವೈದ್ಯಕೀಯ ಉಪಕರಣಗಳ ನಿರ್ವಹಣೆ ಖರ್ಚು ಭರಿಸಿ ಎಂದು ಸೂಚಿಸಿದರು.
ನ್ಯಾಪಕಿನ್ ಉತ್ಪಾದನಾ ಘಟಕಕ್ಕೆ ಭೇಟಿ: ಕಡಗಂಚಿ ಗ್ರಾಮದಲ್ಲಿ ಉದ್ಯೋಗ ಖಾತ್ರಿಯಡಿ ಕಡಗಂಚಿ ಸಂಜೀವನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ಪ್ರಾರಂಭಿಸಿರುವ ಸಂಜೀವಿನಿ ಸಖೀ ಸ್ಯಾನಿಟರಿ ನ್ಯಾಪಕಿನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಉತ್ಪಾದಕಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಸಂಘದ ಸದಸ್ಯರೊಂದಿಗೆ ವೀಕ್ಷಿಸಿ, ಸಂಜೀವಿನಿ ಸಖೀ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಜತೆ ಚರ್ಚಿಸಿದರು.
ಸಂಘದ ಮಹಿಳೆಯರು ಸ್ವಾವಲಂಬಿಯಾಗಿ ಎನ್ ಆರ್‌ಎಲ್‌ಎಂ ಯೋಜನೆಯಡಿ ಸಮುದಾಯ ಬಂಡವಾಳ ನಿ ಧಿ ಸಾಲ ಪಡೆದು ಈ ಘಟಕವನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ ಘಟಕದಲ್ಲಿ 16 ಸದಸ್ಯರು ಕಾರ್ಯನಿರ್ವಹಿಸುತ್ತಿದ್ದು, ದಿನವೊಂದಕ್ಕೆ ನೂರು ನ್ಯಾಪಕಿನ್ ಪ್ಯಾಡ್‌ಗಳನ್ನು ಸಿದ್ಧಪಡಿಸಿ, ಎಂಟು ಪ್ಯಾಡ್‌ಗಳ ಒಂದು ಪ್ಯಾಕ್ ತಯಾರಿಸಿ, 30ರೂ.ಗಳಂತೆ ಸ್ಥಳೀಯವಾಗಿ ಎಂಬಿಕೆಎಲ್ ಸಿಆರ್‌ಪಿ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಅರಿತರು.
ಬೆಳೆ ವೀಕ್ಷಣೆ: ತಾಲೂಕಿನ ಕಡಗಂಚಿ, ಕೊಡಲ ಹಂಗರಗಾ, ಖಜೂರಿ ಗ್ರಾಮಗಳಲ್ಲಿನ ರೈತರು ತೋಟಗಾರಿಕೆ ಇಲಾಖೆ ಅಡಿಯಲ್ಲಿ ಕಡಗಂಚಿ ಗ್ರಾಮದಲ್ಲಿ ಸರ್ಕಾರದ ಸಬ್ಸಿಡಿ ಅನುದಾನ ಪಡೆದು ಬೆಳೆದ ಮೂರುವರೆ ಎಕರೆಯಲ್ಲಿ ಬಾಳೆ ಹಾಗೂ ಟೊಮೋಟೋ ಬೆಳೆ ವೀಕ್ಷಿಸಿದರು. ಸಬ್ಸಿಡಿ ದರದಲ್ಲಿ ರೈತರು ಖರೀದಿಸಿದ ಟ್ರಾಕ್ಟರ್ ವೀಕ್ಷಿಸಿ, ರೈತರ ಜತೆ ಟ್ಯಾಕ್ಟರ್‌ಗಳ ಉಪಯೋಗದ ಕುರಿತು ಚರ್ಚೆ ಮಾಡಿದರು.
ನಂತರ ಕೂಡಲಹಂಗರಗಾ ಗ್ರಾಪಂಗೆ ಭೇಟಿ ನೀಡಿದ ಸಿಇಒ ಅವರು ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಕೃಷಿ ಹೊಂಡ ಹಾಗೂ ಪಾಲಿಹೌಸ್ ವೀಕ್ಷಿಸಿ ನಂತರ ಖಜೂರಿ ಗ್ರಾಮದ ರೈತರ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಈರುಳ್ಳಿ ಶೇಖರಣ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಸಿದ್ಧೇಶ್ವರ ನೀರು ಬಳಕೆದಾರ ಸಂಘದವರು ನಿರ್ಮಾಣ ಮಾಡಿರುವ ಕೃಷಿ ಹೊಂಡ ವೀಕ್ಷಿಸಿದರು. ಸ್ಥಳದಲ್ಲಿ ಹಾಜರಿದ್ದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲೆಯಾದ್ಯಂತ
ಸರ್ಕಾರದ ಇಲಾಖೆಗಳ ಸೌಲಭ್ಯಗಳನ್ನು ರೈತರಿಗೆ ಹೆಚ್ಚು ಮಂಜೂರು ಮಾಡುವಂತೆ ಸೂಚಿಸಿದರು.