Advertisement

ಪಾಂಡೆ ಶತಕ‌; ಭಾರತಕ್ಕೆ ಹ್ಯಾಟ್ರಿಕ್‌ ಜಯ

12:11 AM Jul 18, 2019 | Sriram |

ನಾರ್ತ್‌ ಸೌಂಡ್‌ (ಆ್ಯಂಟಿಗುವಾ): ನಾಯಕ ಮನೀಷ್‌ ಪಾಂಡೆ ಬಾರಿಸಿದ ಆಕರ್ಷಕ ಶತಕದ ಸಾಹಸದಿಂದ ಆತಿಥೇಯ ವೆಸ್ಟ್‌ ಇಂಡೀಸ್‌ “ಎ’ ತಂಡದ ಎದುರಿನ 3ನೇ ಏಕದಿನ ಪಂದ್ಯವನ್ನೂ ಗೆದ್ದ ಭಾರತ “ಎ’ ತಂಡ ಸರಣಿಯನ್ನು ತನ್ನದಾಗಿಸಿಕೊಂಡಿದೆ.

Advertisement

ಬುಧವಾರ ಇಲ್ಲಿನ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ನಡೆದ 3ನೇ ಅನಧಿಕೃತ ಏಕದಿನ ಪಂದ್ಯವನ್ನು ಭಾರತ “ಎ’ ತಂಡ 148 ರನ್ನುಗಳ ಭಾರೀ ಅಂತರದಿಂದ ಜಯಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ “ಎ’ತಂಡ 6 ವಿಕೆಟಿಗೆ 295 ರನ್‌ ಪೇರಿಸಿದರೆ, ವೆಸ್ಟ್‌ ಇಂಡೀಸ್‌ “ಎ’ ತಂಡ 34.2 ಓವರ್‌ಗಳಲ್ಲಿ 147 ರನ್ನಿಗೆ ಕುಸಿಯಿತು.

ಇದರೊಂದಿಗೆ ಭಾರತ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಗಳಿಸಿ ಸರಣಿ ವಶಪಡಿಸಿಕೊಂಡಿತು. ಮೊದಲೆರಡು ಪಂದ್ಯಗಳನ್ನು ಪಾಂಡೆ ಪಡೆ 65 ರನ್ನುಗಳಿಂದ ಗೆದ್ದಿತ್ತು.

ಪಾಂಡೆ ಅಬ್ಬರದ ಬ್ಯಾಟಿಂಗ್‌
ಆರಂಭಕಾರ ಅನ್ಮೋಲ್‌ಪ್ರೀತ್‌ ಸಿಂಗ್‌ ಅವರನ್ನು ಶೂನ್ಯಕ್ಕೆ ಕಳೆದುಕೊಂಡ ಬಳಿಕ ಶುಭಮನ್‌ ಗಿಲ್‌ (77) ಮತ್ತು ಶ್ರೇಯಸ್‌ ಅಯ್ಯರ್‌ (47) ಸೇರಿಕೊಂಡು ಭಾರತವನ್ನು ಆಧರಿಸಿದರು. ಇವರಿಂದ 2ನೇ ವಿಕೆಟಿಗೆ 109 ರನ್‌ ಒಟ್ಟುಗೂಡಿತು.

ಮುಂದಿನದು ಮನೀಷ್‌ ಪಾಂಡೆ ಅವರ ಕಪ್ತಾನನ ಆಟ. ಅವರು 103 ಎಸೆತಗಳಿಂದ ಸರಿಯಾಗಿ 100 ರನ್‌ ಬಾರಿಸಿದರು. ಈ ಆಕ್ರಮಣಕಾರಿ ಬ್ಯಾಟಿಂಗ್‌ ವೇಳೆ 5 ಸಿಕ್ಸರ್‌, 6 ಬೌಂಡರಿ ಸಿಡಿಯಲ್ಪಟ್ಟಿತು. ಹನುಮ ವಿಹಾರಿ 29, ಇಶಾನ್‌ ಕಿಶನ್‌ 24ರನ್‌ ಮಾಡಿದರು.

Advertisement

ಕೃಣಾಲ್‌ ದಾಳಿಗೆ ಕುಸಿತ
ವೆಸ್ಟ್‌ ಇಂಡೀಸಿನ ಆರಂಭ ಉತ್ತಮ ಮಟ್ಟದಲ್ಲೇ ಇತ್ತು. ಕ್ಯಾಂಬೆಲ್‌-ಆ್ಯಂಬ್ರಿಸ್‌ 51 ರನ್‌ ಒಟ್ಟುಗೂಡಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ವಿಂಡೀಸಿನ ಎಂದಿನ ಕುಸಿತ ಮೊದಲ್ಗೊಂಡಿತು. ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ ದಾಳಿಗೆ ತತ್ತರಿಸಿ ಒಂದೇ ಸಮನೆ ವಿಕೆಟ್‌ ಕಳೆದುಕೊಳ್ಳತೊಡಗಿತು. 96 ರನ್‌ ಅಂತರದಲ್ಲಿ ಎಲ್ಲ 10 ವಿಕೆಟ್‌ ಬಿತ್ತು. ಪಾಂಡ್ಯ ಸಾಧನೆ 25ಕ್ಕೆ 5 ವಿಕೆಟ್‌.10ನೇ ಕ್ರಮಾಂಕದಲ್ಲಿ ಆಡಲಿಳಿದು 34 ರನ್‌ ಮಾಡಿದ ಕಿಮೊ ಪೌಲ್‌ ಅವರದೇ ವಿಂಡೀಸ್‌ ಸರದಿಯ ಹೆಚ್ಚಿನ ಗಳಿಕೆ.

ಸಂಕ್ಷಿಪ್ತ ಸ್ಕೋರ್‌: ಭಾರತ “ಎ’-6 ವಿಕೆಟಿಗೆ 295 (ಪಾಂಡೆ 100, ಗಿಲ್‌ 77, ಅಯ್ಯರ್‌ 47, ಕಾರ್ನ್ವಾಲ್‌ 37ಕ್ಕೆ 2, ಶೆಫ‌ರ್ಡ್‌ 51ಕ್ಕೆ 2). ವೆಸ್ಟ್‌ ಇಂಡೀಸ್‌ “ಎ’-34.2 ಓವರ್‌ಗಳಲ್ಲಿ 147 (ಕಿಮೊ ಪೌಲ್‌ 34, ಆ್ಯಂಬ್ರಿಸ್‌ 30, ಕ್ಯಾಂಬೆಲ್‌ 21, ಕೆ. ಪಾಂಡ್ಯ 25ಕ್ಕೆ 5, ವಿಹಾರಿ 23ಕ್ಕೆ 2).
ಪಂದ್ಯಶ್ರೇಷ್ಠ: ಮನೀಷ್‌ ಪಾಂಡೆ.

Advertisement

Udayavani is now on Telegram. Click here to join our channel and stay updated with the latest news.

Next