Advertisement

ಏಳು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಶತಕ

12:15 AM May 28, 2020 | mahesh |

ಬೆಂಗಳೂರು: ಲಾಕ್‌ಡೌನ್‌ 4.0 ಜಾರಿಯ ಬಳಿಕ ಅಂದರೆ ಕಳೆದ ಹತ್ತು ದಿನಗಳಲ್ಲಿ ಏಳು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಶತಕದ ಗಡಿ ದಾಟಿದ್ದು, ಒಟ್ಟು 1,271 ಮಂದಿ ಸೋಂಕಿತರಾಗಿದ್ದಾರೆ. ಈ ಏಳು ಜಿಲ್ಲೆಗಳು ಆರಂಭದಲ್ಲಿ ಬೆರಳೆಣಿಕೆ ಸೋಂಕಿಗೆ ಸಾಕ್ಷಿಯಾಗಿದ್ದರೂ, ಈಗ ಒಂದೇ ಸವನೆ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಲಾಕ್‌ಡೌನ್‌ 3.0 ಮೇ 17ಕ್ಕೆ ಮುಕ್ತಾಯಗೊಂಡಾಗ ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಕಲಬುರಗಿ ಸೇರಿ ಮೂರು ಜಿಲ್ಲೆಗಳಲ್ಲಿ ಮಾತ್ರ ಸೋಂಕು ನೂರರ ಗಡಿ ದಾಟಿತ್ತು. ಲಾಕ್‌ಡೌನ್‌ 4.0 (ಮೇ 18 ರಿಂದ 27ರ ವರೆಗೆ) ಜಾರಿ ಬಳಿಕ ಯಾದಗಿರಿ, ಮಂಡ್ಯ, ದಾವಣಗೆರೆ, ಹಾಸನ, ಚಿಕ್ಕಬಳ್ಳಾಪುರ, ಬೀದರ್‌, ಉಡುಪಿ ಸೇರಿ ಏಳು ಜಿಲ್ಲೆಗಳು ಶತಕದ ಗಡಿ ದಾಟಿವೆ. ಹತ್ತು ದಿನಗಳ ಸೋಂಕಿತರಲ್ಲಿ ಶೇ. 80ರಷ್ಟು ಮಂದಿ ಹೊರರಾಜ್ಯದ, ಶೇ. 3ರಷ್ಟು ಮಂದಿ ಹೊರದೇಶ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

Advertisement

ಒಟ್ಟಾರೆಯಾಗಿ ರಾಜ್ಯದ 29 ಜಿಲ್ಲೆಗಳಲ್ಲಿ 2,418 ಸೋಂಕು ಪ್ರಕರಣ ದೃಢಪಟ್ಟಿದ್ದು, 1,588 ಸಕ್ರಿಯ ಪ್ರಕರಣಗಳಿವೆ. ಬುಧವಾರ 135 ಮಂದಿ ಸೋಂಕಿತರಾಗಿದ್ದಾರೆ.  ಒಟ್ಟಾರೆಯಾಗಿ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಾವಿನ ಸರಣಿ ಮುಂದುವರೆದಿದ್ದು ಯಾದಗಿರಿ, ಬೀದರ್‌ ಹಾಗೂ ವಿಜಯಪುರದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಈ ಮೂಲಕ ಸೋಂಕು ಚಿಕಿತ್ಸೆ ಫ‌ಲಕಾರಿಯಾಗದೇ ಸಾವಿಗೀಡಾದವರ ಸಂಖ್ಯೆ 47ಕ್ಕೆ ಹೆಚ್ಚಳವಾಗಿದೆ.
ಬಹುತೇಕರು ಹೊರರಾಜ್ಯದಿಂದ ಬಂದವರು ಬುಧವಾರ ದೃಢಪಟ್ಟ 135 ಸೋಂಕಿತರ ಪೈಕಿ 116 ಮಂದಿ ಸೋಂಕಿತರು ಹೊರರಾಜ್ಯದಿಂದ, ಇಬ್ಬರು ಹೊರದೇಶದಿಂದ ಕರ್ನಾಟಕಕ್ಕೆ ಆಗಮಿಸಿದ್ದವರು. ಕಲಬುರಗಿ (28), ಯಾದಗಿರಿ (16), ಹಾಸನ (15), ಬೀದರ್‌ (13), ದಕ್ಷಿಣ ಕನ್ನಡ (11) , ಉಡುಪಿ (9) ಜಿಲ್ಲೆಗಳಲ್ಲಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಎಲ್ಲ ಜಿಲ್ಲೆಗಳಿಗೂ ಬಹುತೇಕ ಸೋಂಕಿತರು ಮಹಾರಾಷ್ಟ್ರದಿಂದ ಬಂದಿದ್ದಾರೆ.
ಸೋಂಕಿತರ ಪೈಕಿ 17 ಮಂದಿ ಬುಧವಾರ ಗುಣ ಮುಖರಾಗಿದ್ದಾರೆ.

ಕ್ವಾರಂಟೈನ್‌ಗೆ ಒಪ್ಪದ ಯುವತಿ: ಹಲ್ಲೆಗೆ ಯತ್ನ
ಕ್ವಾರಂಟೈನ್‌ ಆಗಲು ನಿರಾಕರಿಸಿ ಪೊಲೀಸರ ಮೇಲೆ ಕೈ ಮಾಡಲು ಮುಂದಾಗಿದ್ದ ಯುವತಿ ವಿರುದ್ಧ ನಗರ ರೈಲು ನಿಲ್ದಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹರಿಯಾಣ ಮೂಲದ 25 ವರ್ಷದ ಯುವತಿ ದಿಲ್ಲಿಯಿಂದ ಸ್ಪೆಷಲ್‌ ಸೂಪರ್‌ ಫಾಸ್ಟ್‌ ರೈಲಿನಲ್ಲಿ ನಗರದ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದರು. ರಾಜ್ಯ ಸರಕಾರದ ಆದೇಶದಂತೆ ಹೊರರಾಜ್ಯದಿಂದ ಬಂದಿದ್ದರಿಂದ ಯುವತಿಗೆ ಕ್ವಾರಂಟೈನ್‌ ಆಗುವಂತೆ ಬಿಬಿಎಂಪಿ ಸಿಬಂದಿ ಸೂಚಿಸಿದ್ದರು. ಅದನ್ನು ನಿರಾಕರಿಸಿದ ಆಕೆ ವಾಗ್ವಾದಕ್ಕಿಳಿದು ಕರ್ತವ್ಯ ನಿರತ ಪೊಲೀಸರು ಹಾಗೂ ಸಿಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next