ಮಂಗಳೂರು: ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದರಿಂದ ತೀವ್ರ ಬರದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರದ ಪರಿಹಾರ 3,454 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ನ್ಯಾಯಾಲಯದ ಮೊರೆ ಹೋದ ನಿದರ್ಶನ ಇದು ಪ್ರಥಮವಾಗಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಕೇಂದ್ರ ಸರಕಾರ ಮಾಡುವ ತಾರತಮ್ಯ ನೀತಿಗೆ ಇದು ಎಚ್ಚರಿಕೆಯ ಸಂದೇಶ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಅವರು ಮಾತನಾಡಿ, ಈ ಹಿಂದೆಯೇ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯದ ಜನರೆದುರು ಹೇಳಿಕೆ ನೀಡಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಮುಖಂಡರಾದ ಆರ್. ಅಶೋಕ್ ಅವರು ಈ ಕುರಿತ ದಾಖಲೆ ಒದಗಿಸಲಿ ಎಂದು ಸವಾಲು ಹಾಕಿದರು.
ಬರದಿಂದಾಗಿ ರಾಜ್ಯದಲ್ಲಿ ಅಂದಾಜು 35,000 ಕೋಟಿ ರೂ. ನಷ್ಟವಾಗಿದೆ. ಕೇಂದ್ರದಿಂದ ಬರ ಪರಿಹಾರವಾಗಿ 18,171 ಕೋಟಿ ರೂ.ಗಳಿಗೆ ಮನವಿ ಸಲ್ಲಿಸಲಾಗಿತ್ತು. ರಾಜ್ಯದ ಹಿರಿಯ ಸಚಿವರು ಮಾತ್ರವಲ್ಲದೆ ಖುದ್ದು ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯನ್ನೂ ಭೇಟಿ ಮಾಡಿ ಪರಿಹಾರದ ಬೇಡಿಕೆ ಸಲ್ಲಿಸಿದ್ದರು. ಸಿಎಂ ನೇತೃತ್ವದಲ್ಲಿ ರಾಜ್ಯದ ಎಲ್ಲ ಶಾಸಕರು ದಿಲ್ಲಿಯಲ್ಲಿ ಪ್ರತಿಭಟಿಸಿದರೂ ಸ್ಪಂದನೆ ನೀಡಿರಲಿಲ್ಲ. ಈ ನಡುವೆ ಹಣಕಾಸು ಸಚಿವರು ಕೇಂದ್ರದಿಂದ ಬರ ಪರಿಹಾರ ನೀಡಿದ್ದಾಗಿ ಹೇಳಿಕೆ ನೀಡಿದ್ದರು. ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಬರ ಪರಿಹಾರ ಒದಗಿಸಲಾಗಿದೆ ಎಂದೇ ವಾದಿಸಿದ್ದರು. ಕೊನೆಗೂ ಮುಖ್ಯಮಂತ್ರಿ ದಾರಿ ಕಾಣದೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಿದ್ದರು. ಸುಪ್ರೀಂ ಕೋರ್ಟ್‌ನ ಛೀಮಾರಿಯಿಂದ ಬರ ಪರಿಹಾರ ಬಿಡುಗಡೆಯಾಗಿದೆ ಎಂದರು.
ಚುನಾವಣ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸುವ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಗೋಹತ್ಯೆ ಖಚಿತ, ಎಸ್‌ಸಿ/ಒಬಿಸಿ ಮೀಸಲಾತಿ ಬದಲಾವಣೆ, ಕಾಶ್ಮೀರದಲ್ಲಿ 370ನೆ ವಿಧಿ ವಾಪಸ್ ಪಡೆಯಲಾಗುವುದು, ಮಂಗಳಸೂತ್ರಕ್ಕೆ ರಕ್ಷಣೆ ಇಲ್ಲ ಎಂಬೆಲ್ಲ ಭಾವನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಆ ರೀತಿ ಎಲ್ಲಿ ಹೇಳಲಾಗಿದೆ ಎಂಬುದಕ್ಕೆ ಪ್ರಧಾನಿಯ ವರು ಆಧಾರ ಒದಗಿಸಲಿ ಎಂದರು.
ದ.ಕ. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮುಖಂಡರು ಒಗ್ಗಟ್ಟಿನ ಪ್ರದರ್ಶನ ನೀಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಮಾಡಿದ್ದು, ಪಕ್ಷಕ್ಕೆ ಹೆಚ್ಚು ಮತಗಳನ್ನು ಕೊಡಿಸುವಲ್ಲಿ ಶ್ರಮಿಸಿದ್ದಾರೆ. 33 ವರ್ಷಗಳಿಂದ ಜಿಲ್ಲೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್‌ನ ಒಗ್ಗಟ್ಟಿನ ಹೋರಾಟಕ್ಕೆ ಉತ್ತಮ ಫಲ ದೊರಕಲಿದೆ. ಪದ್ಮರಾಜ್ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದರು.
ಮುಖಂಡರಾದ ಸದಾಶಿವ ಉಳ್ಳಾಲ್, ಜಿ.ಎ. ಬಾವ, ಎಂ.ಶಶಿಧರ ಹೆಗ್ಡೆ, ಪ್ರತಿಭಾ ಕುಳಾಯಿ, ಅಶ್ವಿನ್ ಕುಮಾರ್ ರೈ, ಮಹಾಬಲ ಮಾರ್ಲ, ಸ್ಟಾ ನಿ ಅಲ್ವಾರಿಸ್, ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ಅಶ್ರಫ್, ಶಾಲೆಟ್ ಪಿಂಟೋ, ಅಪ್ಪಿ ಉಪಸ್ಥಿತರಿದ್ದರು.