ಗುವಾಹಟಿ/ಹೊಸದಿಲ್ಲಿ: ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಒದಗಿಸಿರುವಂಥ ಸಂವಿಧಾನದ 371ನೇ ವಿಧಿಯನ್ನು ಬದಲಿಸುವ ಅಥವಾ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಈ ರಾಜ್ಯಗಳಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗನೂ ಪ್ರವೇಶಿಸದಂತೆ ನೋಡಿಕೊಳ್ಳುತ್ತೇವೆ ಎಂಬ ಆಶ್ವಾಸನೆಯನ್ನೂ ನೀಡಿದ್ದಾರೆ.
ಈಗ ಈಶಾನ್ಯದ 8 ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಈ ಮಾತುಗಳನ್ನು ಪುನರುಚ್ಚರಿಸುತ್ತಿದ್ದೇನೆ. 370 ಮತ್ತು 371ನೇ ವಿಧಿ ಭಿನ್ನವಾಗಿದ್ದು, 371 ಅನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕುರಿತೂ ಪ್ರಸ್ತಾಪಿಸಿದ ಅಮಿತ್ ಶಾ, ‘ಈಗ ಎನ್‌ಆರ್‌ಸಿ ಬಗ್ಗೆ ಅನೇಕರು ಪ್ರಶ್ನಿಸುತ್ತಿದ್ದಾರೆ. ಆದರೆ, ಈ ಪ್ರದೇಶವನ್ನು ಯಾವೊಬ್ಬ ಅಕ್ರಮ ವಲಸಿಗನೂ ಪ್ರವೇಶಿಸದಂತೆ ನೋಡಿಕೊಳ್ಳುವುದಕ್ಕೆ ಬಿಜೆಪಿ ನೇತೃತ್ವದ ಸರಕಾರವು ಬದ್ಧವಾಗಿದೆ’ ಎಂದಿದ್ದಾರೆ. ಎನ್‌ಆರ್‌ಸಿ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಶಾ ಅವರ ಮೊದಲ ಅಸ್ಸಾಂ ಭೇಟಿ ಇದಾಗಿದೆ.
ಸ್ಥಾನಮಾನ ಕುರಿತು ಒಪ್ಪಿಗೆ: ಇದೇ ವೇಳೆ, ಲಡಾಖ್‌ಗೆ ‘ಬುಡಕಟ್ಟು ಪ್ರದೇಶ’ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಗೃಹ, ಕಾನೂನು, ಬುಡಕಟ್ಟು ವ್ಯವಹಾರಗಳ ಸಚಿವರು ಹಾಗೂ ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗ ಒಪ್ಪಿಗೆ ಸೂಚಿಸಿದೆ.
ಪಾಕ್-ಚೀನ ಮಾತುಕತೆ: ಈ ನಡುವೆ, ರವಿವಾರ ಪಾಕಿಸ್ಥಾನ ಮತ್ತು ಚೀನ ಕಾಶ್ಮೀರ ವಿಚಾರ ಕುರಿತು ಚರ್ಚಿಸಿದ್ದು, ಪರಸ್ಪರ ಗೌರವ ಮತ್ತು ಸಮಾನತೆಯ ಆಧಾರದಲ್ಲಿ ಮಾತುಕತೆ ಮೂಲಕ ವಿವಾದ ಇತ್ಯರ್ಥಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ರವಿವಾರ ಪಾಕ್ ಸೇನೆ ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಕದನ ವಿರಾಮ ಉಲ್ಲಂಘಿಸಿ, ಭಾರತದ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿದೆ.
Advertisement
ಅಸ್ಸಾಂನ ಗುವಾಹಟಿಯಲ್ಲಿ ರವಿವಾರ ನಡೆದ ನಾರ್ತ್ ಈಸ್ಟ್ ಕೌನ್ಸಿಲ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿ ರದ್ದು ಮಾಡಿದ ಬಳಿಕ ಕೇಂದ್ರ ಸರಕಾರವು 371ನೇ ವಿಧಿಯನ್ನೂ ರದ್ದು ಮಾಡಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇವು ಸಂಪೂರ್ಣ ಸುಳ್ಳು ಹಾಗೂ ಹಾದಿತಪ್ಪಿಸುವ ಮಾಹಿತಿ. 371ನೇ ವಿಧಿ ರದ್ದು ಮಾಡಲ್ಲ ಎಂದು ಸಂಸತ್‌ನಲ್ಲೂ ನಾನು ಸ್ಪಷ್ಟ ಪಡಿಸಿದ್ದೇನೆ.
Related Articles
Advertisement
ಕಾಶ್ಮೀರಿ ಪಂಡಿತರ ಪ್ರತಿಭಟನೆ: ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ಕಾಶ್ಮೀರದ ಬೆಳವಣಿಗೆಗಳ ಕುರಿತಾಗಿ ಪಕ್ಷಪಾತೀಯ ವರದಿ ಪ್ರಕಟಿಸುತ್ತಿದೆ ಎಂದು ಆರೋಪಿಸಿ ಕಾಶ್ಮೀರಿ ಪಂಡಿತರು ರವಿವಾರ ಪತ್ರಿಕೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ, ವಿಶೇಷ ಸ್ಥಾನಮಾನ ವಾಪಸ್ ಪಡೆಯುವ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಿ ಮೋದಿ ಪರ ಘೋಷಣೆಗಳನ್ನೂ ಕೂಗಿದ್ದಾರೆ. ಆದರೆ, ತಮ್ಮ ಸುದ್ದಿಗಳ ಬಗ್ಗೆ ಸಮರ್ಥಿಸಿಕೊಂಡಿರುವ ಪತ್ರಿಕೆ, ನಾವು ನ್ಯಾಯಯುತ, ನಿಖರ ಹಾಗೂ ಸಮಗ್ರ ವರದಿ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ.
ಕಾಶ್ಮೀರದ ಹಲವೆಡೆ ಕರ್ಫ್ಯೂ ಮಾದರಿ ನಿರ್ಬಂಧ
ಮೊಹರಂ ಹಿನ್ನೆಲೆಯಲ್ಲಿ ಯಾರು ಕೂಡ ಮೆರವಣಿಗೆ ನಡೆಸದಂತೆ ತಡೆಯಲು ಕಾಶ್ಮೀರದ ಬಹುತೇಕ ಭಾಗಗಳಲ್ಲಿ ರವಿವಾರ ಕರ್ಫ್ಯೂ ಮಾದರಿ ನಿರ್ಬಂಧ ವಿಧಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಸೇರಿದರೆ, ಹಿಂಸಾಚಾರ ಭುಗಿಲೇಳಬಹುದು ಎಂಬ ಶಂಕೆಯಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಯತ್ನ ವಿಫಲಗೊಳಿಸಲು ಟೀಂ ಮೋದಿ ಸಜ್ಜು
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಪ್ರಮುಖ ಸಭೆ ಸೋಮವಾರ ಆರಂಭವಾಗಲಿದ್ದು, ಅಲ್ಲಿ ಪಾಕಿಸ್ಥಾನ ಕಾಶ್ಮೀರ ವಿಚಾರ ಪ್ರಸ್ತಾವಿಸುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ, ಪಾಕ್ ಯತ್ನ ವಿಫಲಗೊಳಿಸಲು ಟೀಂ ಮೋದಿ ತಂತ್ರ ಹೆಣೆಯುತ್ತಿದೆ. ಸೆ.9ರಿಂದ 27ರವರೆಗೆ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರು 47 ಸದಸ್ಯಬಲದ ಯುಎನ್‌ಎಚ್ಆರ್‌ಸಿಯ ಪ್ರತಿಯೊಬ್ಬ ಸದಸ್ಯರನ್ನೂ ಭೇಟಿಯಾಗಿ ಅಥವಾ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಭಾರತದ ಭದ್ರತಾ ಪಡೆಯ ಕೈಯಲ್ಲಿ ಕಣಿವೆ ರಾಜ್ಯದಲ್ಲಿ ಒಂದೇ ಒಂದು ಪ್ರಾಣಹಾನಿಯೂ ಆಗಿಲ್ಲ ಎಂಬುದನ್ನು ಒತ್ತಿಹೇಳುವುದು ಸರಕಾರದ ಯೋಜನೆಯಾಗಿದೆ. ಅಲ್ಲದೆ, ಈಗಾಗಲೇ ಜೈಶಂಕರ್ ಅವರು ಚೀನ, ಇಂಡೋನೇಷ್ಯಾ, ಮಾಲ್ಡೀವ್ಸ್, ಬೆಲ್ಜಿಯಂ, ಪೋಲೆಂಡ್, ರಷ್ಯಾ, ಹಂಗೇರಿಗೆ ಭೇಟಿ ನೀಡಿ, ಕಣಿವೆ ರಾಜ್ಯದ ವಿಚಾರದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕಾಶ್ಮೀರವು ಭಾರತದ ಆಂತರಿಕ ವಿಚಾರ ಎಂಬುದನ್ನೂ ಅವರು ಒತ್ತಿ ಹೇಳಿದ್ದು, ಈ ಮೂಲಕ ಪಾಕ್ ತಂತ್ರಕ್ಕೆ ಪ್ರತಿತಂತ್ರ ಹೂಡಿದ್ದಾರೆ.