ಕೋಲ್ಕತಾ: ವಿರೋಧ ಪಕ್ಷಗಳು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಬೈಕ್ ರಾಲಿ ನಡೆಸುತ್ತಿದ್ದು, ಈ ವೇಳೆ ಹಿಂಸಾಚಾರ ಸಂಭವಿಸಿದೆ. ಅಲ್ಲದೇ ಬಿಜೆಪಿ ಕಾರ್ಯಕರ್ತನ ಶವ ಪುರ್ಬಾ ಮೇದಿನಿಪುರ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಬಿಜೆಪಿ ಕಾರ್ಯಕರ್ತನನ್ನು ಟಿಎಂಸಿ ಗೂಂಡಾಗಳು ಹತ್ಯೆಗೈದಿರುವುದಾಗಿ ಆರೋಪಿಸಿದೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಪಶ್ಚಿಮಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಬೆಂಗಾವಲು ಪಡೆ ಮತ್ತು ಪಕ್ಷದ ಮುಖಂಡರ ಮೇಲೆ ಹಲ್ಲೆ ನಡೆಸಲಾಗಿದೆ. ಬಿಜೆಪಿ ರಾಲಿಯ ವೇಳೆ ಪ್ರತಿಭಟನಾಕಾರರು ವಾಪಸ್ ಹೋಗಿ ಎಂದು ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಖೋಕಲಾಬಸ್ತಿಯ ಜೈಗಾಂವ್ ನಲ್ಲಿ ಆಯೋಜಿಸಿದ್ದ ರಾಜಕೀಯ ಸಭೆಯಲ್ಲಿ ಭಾಗವಹಿಸಲು ತೆರಳಿದ್ದರು. ಈ ಹಿನ್ನೆಲೆಯಲ್ಲಿ ಬೈಕ್ ರಾಲಿಯನ್ನು ಬಿಜೆಪಿ ಆಯೋಜಿಸಿದ್ದು, ಸುಮಾರು 150 ಬೈಕ್ ಸವಾರರು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ:ರಾಹುಲ್-ಕುಂಬ್ಳೆ ಜೋಡಿ ಉಳಿಸಿಕೊಳ್ಳಲು ಕಿಂಗ್ಸ್ ಇಲೆವೆನ್ ಪಂಜಾಬ್ ಉತ್ಸುಕ
ಕಳೆದ ಒಂದು ತಿಂಗಳಿನಿಂದ ಪಶ್ಚಿಮಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಟಿಎಂಸಿ ನಡುವೆ ದ್ವೇಷದ ವಾತಾವರಣ ತಲೆದೋರಿದೆ. ಇತ್ತೀಚೆಗಷ್ಟೇ ಬಿಜೆಪಿ ಮತಗಟ್ಟೆ ಕಾರ್ಯಕರ್ತ ಗೋಕುಲ್ ಜನಾ ಎಂಬಾತನನ್ನು ಅಮಾನುಷವಾಗಿ ಹತ್ಯೆಗೈಯಲಾಗಿತ್ತು. ಟಿಎಂಸಿ ಗೂಂಡಾಗಳು ಈ ಕೃತ್ಯ ಎಸಗಿರುವುದಾಗಿ ಬಿಜೆಪಿ ಆರೋಪಿಸಿತ್ತು.