Advertisement

“ಅಂಬಿಗ”ರನ್ನು ಎಸ್ಟಿಗೆ ಸೇರಿಸಲು ಕೇಂದ್ರ ಮುಂದಾಗಬೇಕು: ತಂಗಡಗಿ

11:18 PM Jan 21, 2024 | Team Udayavani |

ಬೆಂಗಳೂರು: ಎಲ್ಲ ರೀತಿಯಲ್ಲೂ ಹಿಂದುಳಿದಿರುವ ಅಂಬಿಗ ಸಮುದಾಯವನ್ನ ಎಸ್ಟಿ ಪಟ್ಟಿಗೆ ಸೇರಿಸಲು ಸರಕಾರ ಬದ್ಧವಾಗಿದೆ. ಆದರೆ ಈ ಸಂಬಂಧ ಕೇಂದ್ರ ಸರಕಾರ ಮನಸ್ಸು ಮಾಡಬೇಕಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹಿಂದೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಅಂಬಿಗ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ದಿಟ್ಟ ನಿರ್ಧಾರ ಕೈಗೊಂಡರು. ಜತೆಗೆ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಈಗ 2ನೇ ಬಾರಿ ಸಿಎಂ ಆಗಿರುವ ಅವರು ಬಸವಣ್ಣನ ತತ್ವದಡಿ ಸರಕಾರ ನಡೆಸುತ್ತಿದ್ದಾರೆ. ತುಳಿತಕ್ಕೊಳಗಾದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಪರಿಶಿಷ್ಟ ವರ್ಗಕ್ಕೆ ಸೇರಲು ಸಮುದಾಯ ಸಂಪೂರ್ಣ ಅರ್ಹತೆ ಪಡೆದಿದ್ದು, ಕೇಂದ್ರ ಸರಕಾರ ಈಗ ಪುನಃ ಸ್ಪಷ್ಟೀಕರಣ ಕೇಳಿದೆ. ಮೈಸೂರು ಅಧ್ಯಯನ ಕೇಂದ್ರಕ್ಕೆ ವರದಿ ಕಳಿಸಲಾಗಿದ್ದು, ಅದು ಬಂದ ಬಳಿಕ ಮತ್ತೆ ಕೇಂದ್ರಕ್ಕೆ ಕಳುಹಿಸುವ ಕಾರ್ಯ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಾಣ
ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯ ಕೇಳಿ ಬಂದಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಯಾವುದಾದರೂ ಒಂದು ಪ್ರದೇಶದಲ್ಲಿ ಪ್ರತಿಮೆ ನಿರ್ಮಿಸುವ ಕಾರ್ಯ ನಡೆಯಲಿದೆ ಎಂದು ಶಿವರಾಜ ತಂಗಡಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next