ನವದೆಹಲಿ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್.ಸಿ.ಪಿ.) ಮುಖಂಡ ಮತ್ತು ಮಾಜೀ ಕೇಂದ್ರ ಸಚಿವ ಶರದ್ ಪವಾರ್ ಅವರ ದೆಹಲಿ ನಿವಾಸಕ್ಕಿದ್ದ ಸರಕಾರಿ ಭದ್ರತೆಯನ್ನು ಕೇಂದ್ರ ಸರಕಾರ ಇಂದು ವಾಪಾಸು ಪಡೆದುಕೊಂಡಿದೆ. ಕೇಂದ್ರದ ಈ ನಡೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ ಶರದ್ ಪವಾರ್ ಅವರ ಮನೆಯಲ್ಲಿ ರಕ್ಷಣೆಗೆಂದು ನಿಯೋಜನೆಗೊಂಡಿದ್ದ ದೆಹಲಿ ಪೊಲೀಸ್ ಸಿಬ್ಬಂದಿಗಳನ್ನು ಜನವರಿ 20ರಂದು ಇದ್ದಕ್ಕಿದ್ದಂತೆಯೇ ವಾಪಾಸು ಕರೆಯಿಸಿಕೊಳ್ಳಲಾಗಿದೆ. ಆದಾಗ್ಯೂ ಈ ಹಿರಿಯ ನಾಯಕನಿಗೆ ಮಹಾರಾಷ್ಟ್ರದಲ್ಲಿ ಹಾಗೂ ಅವರ ಪ್ರಯಾಣ ಸಂದರ್ಭದಲ್ಲಿ ಸಾಕಷ್ಟು ಭದ್ರತೆಯನ್ನು ಒದಗಿಸಗುತ್ತಿದೆ.
6 ಜನಪಥದಲ್ಲಿರುವ ಶರದ್ ಪವಾರ್ ಅವರ ನಿವಾಸಕ್ಕಿದ್ದ ಸರಕಾರೀ ಭದ್ರತೆಯನ್ನು ವಾಪಾಸು ಪಡೆದುಕೊಂಡಿರುವ ನರೇಂದ್ರ ಮೋದಿ ಸರಕಾರದ ನಡೆಯನ್ನು ಎನ್.ಸಿ.ಪಿ. ಮತ್ತು ಮಹಾರಾಷ್ಟ್ರದಲ್ಲಿ ಇದರ ಮಿತ್ರಪಕ್ಷವಾಗಿರುವ ಶಿವಸೇನೆ ಸಹಿತ ಹಲವು ರಾಜಕೀಯ ಪಕ್ಷಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಪವಾರ್ ಕುಟುಂಬದ ಯಾರೊಬ್ಬರೂ ಸಹ ಈ ಬೆಳವಣಿಗೆಗೆ ಸಂಬಂಧಿಸಿದಂತೆ ಇದುವರೆಗೂ ಪ್ರತಿಕ್ರಿಯಿಸಿಲ್ಲ.
ಹಿರಿಯ ರಾಜಕಾರಣಿಯಾಗಿರುವ ಶರದ್ ಪವಾರ್ ಅವರಿಗೆ ಬೆದರಿಕೆ ಇರುವ ವಿಚಾರ ತಿಳಿದಿದ್ದರೂ ಮತ್ತು ಈ ಹಿಂದೊಮ್ಮೆ ಅವರು ದಾಳಿಗೊಳಗಾಗಿದ್ದರೂ ಅವರ ನಿವಾಸಕ್ಕೆ ನೀಡಲಾಗಿರುವ ಭದ್ರತೆಯನ್ನು ವಾಪಾಸು ಪಡೆದುಕೊಂಡಿರುವ ಕ್ರಮ ದ್ವೇಷದ ರಾಜಕಾರಣ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಹಿರಿಯ ಶಿವಸೇನಾ ನಾಯಕ ಮತ್ತು ಆ ಪಕ್ಷದ ಸಂಸದ ಸಂಜಯ್ ರಾವತ್ ಅವರು ಹೇಳಿದ್ದಾರೆ.
ಕೇಂದ್ರ ಸರಕಾರವು ಈ ಹಿಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಅವರಿಗಿದ್ದ ಭದ್ರತೆಯನ್ನು ಕಡಿಮೆಗೊಳಿಸಿತ್ತು ಇದೀಗ ಇನ್ನೋರ್ವ ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ನಿವಾಸಕ್ಕಿದ್ದ ಭದ್ರತೆಯನ್ನೇ ವಾಪಾಸು ಪಡೆದುಕೊಂಡಿದೆ, ಇದೊಂದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಎಂದು ರಾವತ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷಕ್ಕೆ ಅಧಿಕಾರ ಕೈತಪ್ಪಿರುವುದು ಕೇಂದ್ರ ಬಿಜೆಪಿ ನಾಯಕರನ್ನು ಕಂಗೆಡಿಸಿದೆ. ಹೀಗಾಗಿ ಬಿಜೆಪಿ ಇದೀಗ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಅವರು ಕೇಂದ್ರದ ಈ ನಡೆಯನ್ನು ಟೀಕಿಸಿದ್ದಾರೆ.
ಶರದ್ ಪವಾರ್ ಅವರೇನೂ ಸಹ್ಯಾದ್ರಿ ಪರ್ವತವಲ್ಲ! ಅವರನ್ನೂ ಬೆದರಿಕೆ ವಿಚಾರಗಳು ಕಾಡುವುದಿಲ್ಲವೇ? ಎಂದು ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅಹ್ವಾದ್ ಅವರು ಕೇಂದ್ರದ ಈ ಕ್ರಮಕ್ಕೆ ಪ್ರತಿಕ್ರಿಯಿಸಿದ್ದಾರೆ.