ನವದೆಹಲಿ: ದಿನದಿಂದ ದಿನಕ್ಕೆ ಭಾರತದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈಗಾಗಲೇ 4,500 ಜನರಿಗೆ ಸೋಂಕು ಇದ್ದಿರುವುದು ದೃಢವಾಗಿದೆ. ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 114ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ 21 ದಿನಗಳ ನಂತರ ಲಾಕ್ ಡೌನ್ ಅನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳುವುದು ತುಂಬಾ ಆತುರದ್ದಾಗಲಿದೆ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ಟೋಮರ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದ ನಂತರ ಮಾತನಾಡಿದ ಅವರು, ಲಾಕ್ ಡೌನ್ ಅಂತ್ಯಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಕೂಡಾ ಲಾಕ್ ಡೌನ್ ಮುಂದುವರಿಸುವ ಇರಾದೆಯಲ್ಲಿದೆ ಎಂದು ಹೇಳಿವೆ. ಈಗಾಗಲೇ ಹಲವು ರಾಜ್ಯಗಳು ಲಾಕ್ ಡೌನ್ ಮುಂದುವರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ವರದಿ ತಿಳಿಸಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೂಡಾ ಈಗಾಗಲೇ ಲಾಕ್ ಡೌನ್ ಮುಂದುವರಿಸುವ ಬಗ್ಗೆ ರಾಜ್ಯಗಳ ಮನವೊಲಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ರಾಜ್ಯ ಸರ್ಕಾರಗಳ ಮನವಿ ಬಗ್ಗೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.