ಹೊಸದಿಲ್ಲಿ : ಕೇಂದ್ರದಲ್ಲಿನ ಎನ್‌ಡಿಎ ಸರಕಾರವು ನವ ಭಾರತ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರಿಂದು ಬಜೆಟ್ ಅಧಿವೇಶನ ಅಂಗವಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸಮಾವೇಶವನ್ನು ಉದ್ದೇಶಿಸಿ ಹೇಳಿದರು.
ಹದಿನಾರನೇ ಲೋಕಸಭೆಯ ಕೊನೆಯ ಅಧಿವೇಶನ ಇದಾಗಿದ್ದು ಈ ವರ್ಷ ಮೇ ತಿಂಗಳಲ್ಲಿ ಮಹಾ ಚುನಾವಣೆ ನಡೆಯಲಿದೆ. ಇಂದು ಗುರುವಾರ ಆರಂಭಗೊಂಡಿರುವ ಬಜೆಟ್ ಅಧಿವೇಶನವು ಫೆ.13ರಂದು ಕೊನೆಗೊಳ್ಳುತ್ತದೆ.
ಎನ್‌ಡಿಎ ಸರಕಾರದ ಪ್ರಧಾನ್ ಮಂದ್ರಿ ಸಹಜ್ ಬಿಜ್‌ಲೀ ಹರ್ ಘರ್ ಯೋಜನೆಯ ಅಡಿ ಎರಡು ಕೋಟಿ 47 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಮತ್ತು ಆ ಮೂಲಕ ಬಡಜನರನ್ನು ಕತ್ತಲೆಯಿಂದ ಮೇಲೆತ್ತಲಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಕಳೆದ ನಾಲ್ಕೂವರೆ ವರ್ಷಗಳಿಂದಲೂ ಸರಕಾರ ಅವಿರತವಾಗಿ ಎಲ್ಲರಿಗೂ ವಸತಿ ಒದಗಿಸುವ ಅಭಿಯಾನವನ್ನು ನಡೆಸುತ್ತಿದೆ. ಹಾಲಿ ಎನ್‌ಡಿಎ ಸರಕಾರ 1 ಕೋಟಿ 30 ಲಕ್ಷ ಮನೆಗಳನ್ನು ನಿರ್ಮಿಸಿದೆ. 2014ಕ್ಕೆ ಮೊದಲಿನ ಐದು ವರ್ಷಗಳಲ್ಲಿ ಆಗಿನ ಸರಕಾರ ಕೇವಲ 25 ಲಕ್ಷ ಮನೆಗಳನ್ನು ಮಾತ್ರವೇ ನಿರ್ಮಿಸಿತ್ತು ಎಂದು ಕೋವಿಂದ್ ಹೇಳಿದರು.
ತ್ರಿವಳಿ ತಲಾಕ್ ಮಸೂದೆಯನ್ನು ಪಾಸು ಮಾಡಿಸುವ ಎಲ್ಲ ಪ್ರಯತ್ನಗಳನ್ನು ಹಾಲಿ ಸರಕಾರ ನಡೆಸುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು.