ಹೊಸದಿಲ್ಲಿ: ತೀರಾ ಸೂಕ್ಷ್ಯ ಎನಿಸಿರುವ ಒಬಿಸಿ ಮೀಸಲಾತಿಯಲ್ಲಿ ಸುಧಾರಣೆ ತರಲು ಚಿಂತನೆ ನಡೆಸಿರುವ ಕೇಂದ್ರ ಸರಕಾರ, ಮೀಸಲಿನಲ್ಲಿ ಬದಲಾವಣೆ ಮಾಡಿದರೆ ಮುಂದೆ ಉಂಟಾಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಶುರು ಮಾಡಿದೆ.
2017ರಲ್ಲಿ ರಚಿಸಲಾಗಿದ್ದ ನ್ಯಾ| ಜಿ.ರೋಹಣಿ ನೇತೃತ್ವದ ಆಯೋಗವು ಒಬಿಸಿಯೊಳಗಿನ ಉಪ ವಿಭಾಗದ ಕುರಿತಂತೆ ಪರಿಶೀಲನೆ ನಡೆಸಿದ್ದು, ಕೇಂದ್ರ ಸರಕಾರಕ್ಕೆ ತನ್ನ ವರದಿ ನೀಡಿದೆ. ಇದರಲ್ಲಿ ಒಬಿಸಿಯೊಳಗೆ ಬರುವ 2,633 ಜಾತಿ-ಉಪಜಾತಿಗಳನ್ನು 4 ಭಾಗಗಳಾಗಿ (1,2,3 ಮತ್ತು 4) ವಿಂಗಡಿಸಿ ಇವುಗಳಿಗೆ ಬೇರೆ ಬೇರೆ ರೀತಿಯ ಮೀಸಲಾತಿ ನೀಡಲು ಶಿಫಾರಸು ನೀಡಿದೆ.
ಹಾಗೆಯೇ ಕೆಟಗೆರಿ 1ರಲ್ಲಿರುವ ಜಾತಿಗಳಿಗೆ ಶೇ. 10ರಷ್ಟು ಮೀಸಲಾತಿ ನೀಡುವುದು, ಉಳಿದ 2,3 ಮತ್ತು 4 ಕೆಟಗೆರಿಗಳ ಜಾತಿಗಳಿಗೆ ಉಳಿದ ಶೇ.17ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡುವುದು ಇದರಲ್ಲಿ ಸೇರಿದೆ. ಈಗ ಇಡೀ ಒಬಿಸಿಗೆ ಶೇ. 27ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, 2,633 ಜಾತಿಗಳಲ್ಲಿ ಇದು ಹಂಚಿಹೋಗಿದೆ. ಇದಕ್ಕೆ ಬದಲಾಗಿ ಹೊಸ ಮಾದರಿಯಲ್ಲಿ ಉಪ ಕೆಟಗೆರಿಗಳನ್ನು ಮಾಡಿ, ಜಾತಿ ಮತ್ತು ಉಪಜಾತಿಗಳ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಟ್ಟರೆ ಎಲ್ಲರಿಗೂ ಸಮಾನವಾದ ಮೀಸಲು ನೀಡಿದಂತೆ ಆಗುತ್ತದೆ ಎಂಬುದು ನ್ಯಾ| ರೋಹಿಣಿ ಆಯೋಗದ ಅಭಿಪ್ರಾಯ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಆಯೋಗವು ಶಿಫಾರಸುಗಳ ಕುರಿತಂತೆ ವಿವರಣೆ ನೀಡಿದೆ. ಆದರೆ ಹೊಸ ಮೀಸಲು ನಿಯಮವನ್ನು ಜಾರಿಗೊಳಿಸಿದರೆ, ರಾಜಕೀಯವಾಗಿ ಆಗುವ ಅಡ್ಡಿಗಳ ಕುರಿತಂತೆ ಕೇಂದ್ರ ಸರಕಾರ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ, 4 ಕೆಟಗೆರಿಗಳ ಆಧಾರದಲ್ಲಿ ಮೀಸಲಾತಿ ನೀಡಿದರೆ, ಮೊದಲ ಕೆಟಗೆರಿಗೆ ಶೇ. 10ರಷ್ಟು ಮೀಸಲು ಸಿಕ್ಕರೆ, 4ನೇ ಕೆಟಗೆರಿಯವರಿಗೆ ಶೇ. 2ರಷ್ಟು ಮೀಸಲಾತಿ ಸಿಗುತ್ತದೆ. ಆಗ ತೀವ್ರ ವಿರೋಧಗಳು ಉಂಟಾಗಬಹುದು ಎಂದು ಹೆಸರೇಳಲು ಇಚ್ಛಿಸದ ಕೇಂದ್ರದ ಸಚಿವರು ಹೇಳಿದ್ದಾರೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.