Advertisement

ಭೂತಾಯಿಗೆ ಭಾರತ ಶಕ್ತಿ: ಕೇಂದ್ರದಿಂದ ಒಂದು ದೇಶ, ಒಂದು ರಸಗೊಬ್ಬರ ಯೋಜನೆ

10:03 AM Aug 26, 2022 | Team Udayavani |

ಹೊಸದಿಲ್ಲಿ: ದೇಶಾದ್ಯಂತ ರಸಗೊಬ್ಬರ ಬ್ರ್ಯಾಂಡ್‌ಗಳಲ್ಲಿ ಏಕೀಕೃತ ವ್ಯವಸ್ಥೆ ಜಾರಿ ಮಾಡಲೆಂದು ಕೇಂದ್ರ ಸರಕಾರವು “ಒಂದು ದೇಶ, ಒಂದು ರಸಗೊಬ್ಬರ’ ಯೋಜನೆ ಯನ್ನು ಜಾರಿ ಗೊಳಿಸಿದೆ.

Advertisement

ಇನ್ನು ಮುಂದೆ ದೇಶದ ಎಲ್ಲ ರಸ ಗೊಬ್ಬರ ಕಂಪೆನಿ ಗಳೂ “ಭಾರತ್‌’ ಎಂಬ ಏಕೈಕ ಬ್ರ್ಯಾಂಡ್‌ ಹೆಸರಿ ನಲ್ಲೇ ರಸ ಗೊಬ್ಬರ ವನ್ನು ಮಾರುವಂತೆ ಕೇಂದ್ರ ಸರಕಾರ ಗುರುವಾರ ಆದೇಶಿಸಿದೆ.

ಯಾವುದೇ ಕಂಪೆನಿ ರಸಗೊಬ್ಬರ ಉತ್ಪಾದಿಸಿ ದರೂ ಎಲ್ಲ ಚೀಲಗಳ ಮೇಲೆ “ಭಾರತ್‌’ ಎಂಬ ಹೆಸರೇ ಇರಲಿದೆ. ಅಂದರೆ, “ಭಾರತ್‌ ಯೂರಿಯಾ, ಭಾರತ್‌ ಡಿಎಪಿ’ ಇತ್ಯಾದಿ ಇರಲಿದೆ. ಈ ನಿಯಮ ಎಲ್ಲ ರಸ ಗೊಬ್ಬರ ಕಂಪೆನಿ, ಸರಕಾರಿ ಸ್ವಾಮ್ಯದ ಕಂಪೆನಿ ಮತ್ತು ಮಾರುಕಟ್ಟೆ ಏಜೆನ್ಸಿಗಳಿಗೆ ಅನ್ವಯವಾಗಲಿದೆ.

ಏನಿದು “ಭಾರತ್‌’ ಯೋಜನೆ?:

ಪ್ರಧಾನಮಂತ್ರಿ ಭಾರತೀಯ ಜನ್‌ ಉರ್ವರಕ್‌ ಪರಿ ಯೋಜನಾ (ಪಿಎಂ ಬಿಜೆಪಿ) ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಇದರಡಿ ಕೇಂದ್ರ ಸರಕಾರವು ವಾರ್ಷಿಕವಾಗಿ ರಸಗೊಬ್ಬರ ಕಂಪೆನಿಗಳಿಗೆ ಸಬ್ಸಿಡಿಯನ್ನು ನೀಡುತ್ತದೆ. ಈ ಸಬ್ಸಿಡಿಯ ಬಗ್ಗೆ ಚೀಲದ ಮೇಲೆಯೇ ಮುದ್ರಿಸಬೇಕು ಎಂಬುದು ಕೇಂದ್ರದ ಅಭಿಪ್ರಾಯ. ಕೇಂದ್ರ ಸರಕಾರವೇ ಚೀಲಗಳನ್ನು ವಿನ್ಯಾಸಗೊಳಿಸಲಿದ್ದು, ಅ. 2ರಿಂದ ಜಾರಿ ಗೊಳ್ಳಲಿದೆ. ಸೆ.15ರಿಂದ ಹಳೇ ವಿನ್ಯಾಸದ ಚೀಲಗಳನ್ನು ಖರೀದಿಸಬಾರದು. ಈಗಾಗಲೇ ಕಂಪೆನಿಗಳ ಬಳಿ ಇರುವ ಹಳೇ ಚೀಲಗಳನ್ನು ಡಿ.12ರ ಒಳಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.

Advertisement

ಚೀಲಗಳ ಮೇಲೆ ಏನಿರಬೇಕು? :

ಸರಕಾರದ ವಿನ್ಯಾಸದಂತೆ ಚೀಲದ ಮೇಲೆ ಮೂರನೇ ಎರಡರಷ್ಟು ಭಾಗದಲ್ಲಿ ಪ್ರಧಾನಮಂತ್ರಿ ಭಾರತೀಯ ಜನ್‌ಉರ್ವರಕ್‌ ಪರಿಯೋಜನಾ ಮತ್ತು ಭಾರತ್‌ ಡಿಎಪಿ ಅಥವಾ ಭಾರತ್‌ ಯೂರಿಯಾ ಅಥವಾ ಭಾರತ್‌ ಎಂಒಪಿ ಅಥವಾ ಭಾರತ್‌ ಎನ್‌ಪಿಕೆ ಎಂದು ಮುದ್ರಿಸಬೇಕು.

ಕೇಂದ್ರ ಸರಕಾರದ ಈ ಆದೇಶಕ್ಕೆ ರಸಗೊಬ್ಬರ ಕಂಪೆನಿಗಳು ವಿರೋಧ ವ್ಯಕ್ತಪಡಿಸಿವೆ. ಈ ನಿರ್ಧಾರದಿಂದಾಗಿ ತಮ್ಮ ಬ್ರ್ಯಾಂಡ್‌ ವ್ಯಾಲ್ಯೂ ಕಡಿಮೆಯಾಗುತ್ತದೆ ಎಂಬುದು ಉದ್ಯ ಮದ ತಜ್ಞರ ಅಭಿಪ್ರಾಯ. ತಮ್ಮ ಬ್ರ್ಯಾಂಡ್‌ನ‌ ಜತೆ, ರೈತರ ಜತೆ ಸಂಪರ್ಕಹೊಂದಿ, ಬೇರೆ ಬೇರೆ ಕಂಪೆನಿ ಗಳ ಉತ್ಪನ್ನಗಳಿಗೂ, ತಮ್ಮ ಉತ್ಪನ್ನಗಳಿಗೂ ಇರುವ ವ್ಯತ್ಯಾಸದ ಬಗ್ಗೆ ಹೇಳುತ್ತಿದ್ದೆವು. ಹೊಸ ನಿಯಮದಂತೆ ಅದಕ್ಕೆ ಅವಕಾಶವಿಲ್ಲ. ಉತ್ಪಾದಕರು ಮತ್ತು ಆಮದುದಾರರ ಜತೆ ಮಾತ್ರ ಕಂಪೆನಿಗಳ ಸಂಪರ್ಕವಿರಲಿದೆ.

ಸರಕಾರದ ಮೇಲೂ ಅಡ್ಡಪರಿಣಾಮ?:

ಉದ್ಯಮದ ವಿಶ್ಲೇಷಕರ ಪ್ರಕಾರ, ಈ ಹೊಸ ಪದ್ಧತಿ ಯಿಂದಾಗಿ ಸರಕಾರದ ಮೇಲೂ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಒಂದು ವೇಳೆ, ರೈತರಿಗೆ ನೀಡಿದ ರಸಗೊಬ್ಬರದ ಗುಣಮಟ್ಟವು ಸರಿಯಾಗಿಲ್ಲವೆಂದಾದರೆ, ಆಗ ರೈತರು ನೇರವಾಗಿ ಸರಕಾರವನ್ನೇ ದೂಷಿಸುತ್ತಾರೆ. ಆಗ ಸರಕಾರದ ವರ್ಚಸ್ಸಿಗೆ ಧಕ್ಕೆ ಆಗಬಹುದು ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಆಕ್ಷೇಪ :

ಇದು ಒಂದು ದೇಶ, ಒಂದು ರಸಗೊಬ್ಬರ ಯೋಜನೆ ಯಲ್ಲ; ಬದಲಿಗೆ ಒಂದು ದೇಶ, ಒಬ್ಬ ವ್ಯಕ್ತಿ, ಒಂದು ರಸ ಗೊಬ್ಬರ ಯೋಜನೆ ಎಂದು ಕಾಂಗ್ರೆಸ್‌ನ ಜೈರಾಮ್‌ ರಮೇಶ್‌ ವ್ಯಂಗ್ಯವಾಡಿದ್ದಾರೆ. ಈ ಯೋಜನೆ ಮೂಲಕ ಬಿಜೆಪಿ ಸರ್ವವ್ಯಾಪಿ ಮತ್ತು ಸ್ವಯಂ ಪ್ರಚಾರಕ್ಕೆ ಮುಂದಾಗಿದೆ. ಅಂದರೆ, ಈ ಯೋಜನೆ ಹೆಸರು ಪಿಎಂ-ಬಿಜೆಪಿ. ಹೀಗಾಗಿ, ಅವರು ಪ್ರಧಾನಿ ಮತ್ತು ಬಿಜೆಪಿ ಎಂಬ ಎರಡನ್ನು ಜತೆಗೂಡಿ ಗೊಬ್ಬರದ ಚೀಲದ ಮೇಲೆ ಮುದ್ರಿಸಲಾಗಿದೆ ಎಂದಿದ್ದಾರೆ.

ಏಕೆ ಈ ಯೋಜನೆ? :

ಕೇಂದ್ರ ಸರಕಾರದ ಪ್ರಕಾರ ರಸಗೊಬ್ಬರಗಳು ಒಂದೇ ಬ್ರ್ಯಾಂಡ್‌ನ‌ಲ್ಲಿ ಇರಬೇಕು. ಇದರಿಂದ ಸರಕು ಸಾಗಣೆ ವೆಚ್ಚ  ಹಾಗೂ ಸಾಗಣೆ ಸಮಯ ಕಡಿಮೆ ಯಾಗಲಿದೆ. ಬ್ರ್ಯಾಂಡ್‌ಗಳ ಹೊರತಾಗಿಯೂ ರಸಗೊಬ್ಬರವು ವರ್ಷವಿಡೀ ಲಭ್ಯವಿರುತ್ತದೆ. ಕೈಗಾರಿಕಾ ಬಳಕೆಗೆ ಯೂರಿ ಯಾ ಬಳಕೆ ನಿಲ್ಲಲಿದೆ. ರಸಗೊಬ್ಬರ ಕಂಪೆನಿಗಳಿಗೆ ಸಬ್ಸಿಡಿ ನೀಡುವ ಕೇಂದ್ರ ಸರಕಾರವೇ ಅವುಗಳ ದರ ಹಾಗೂ ಮಾರಾಟ ಕೇಂದ್ರವನ್ನೂ ತೀರ್ಮಾನಿಸಲಿದೆ. ಹೀಗಾಗಿ ರಸಗೊಬ್ಬರಕ್ಕಾಗಿ ಹೆಚ್ಚು ವೆಚ್ಚ ಮಾಡಿ, ಕಡಿಮೆ ಹೆಸರು ಪಡೆದುಕೊಳ್ಳುವುದೇಕೆ ಎಂಬ ಕಾರಣವೂ ಈ ನಿರ್ಧಾರದ ಹಿಂದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next