ಹೊಸದಿಲ್ಲಿ : ವಿನಾಶಕಾರಿ ಫೋನಿ ಚಂಡಮಾರುತದಿಂದ ತೀವ್ರವಾಗಿ ತತ್ತರಿಸಿರುವ ಒಡಿಶಾ ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 1,000 ಕೋಟಿ ರೂ. ಹೆಚ್ಚುವರಿ ನೆರವನ್ನು ಪ್ರಕಟಿಸಿದ್ದಾರೆ.
ಈ ಮೊದಲು ಪ್ರಕಟಿಸಲಾಗಿದ್ದ 381 ಕೋಟಿ ರೂ. ಗಳಿಗೆ ಹೆಚ್ಚುವರಿಯಾಗಿ ಈ 1,000 ಕೋಟಿ ರೂ. ನೆರವನ್ನು ಕೊಡಲಾಗಿದೆ.
ಫೋನಿ ಚಂಡಮಾರುತ ಪೀಡಿತ ರಾಜ್ಯಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ಕ್ಕೆ 1,000 ಕೋಟಿ ರೂ. ಗಳ ಹೆಚ್ಚುವರಿ ನೆರವು ಪ್ರಕಟಿಸಿದರು; ಮಾತ್ರವಲ್ಲದೆ ಕೇಂದ್ರದಿಂದ ಒಡಿಶಾ ಕ್ಕೆ ಎಲ್ಲ ರೀತಿಯ ಬೆಂಬಲದ ಭರವಸೆಯನ್ನು ನೀಡಿದರು.
ವೈಮಾನಿಕ ಸಮೀಕ್ಷೆಯ ಬಳಿಕ ಪ್ರಧಾನಿ ಮೋದಿ ಅವರು ಚಂಡಮಾರುತ ಹಾನಿಯನ್ನು ನಿಭಾಯಿಸುವುದಕ್ಕಾಗಿ ಕೇಂದ್ರದೊಂದಿಗೆ ಟೊಂಕ ಕಟ್ಟಿ ಕೆಲಸ ಮಾಡಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಮರೋಪಾದಿಯ ಯತ್ನಗಳನ್ನು ಬಹುವಾಗಿ ಪ್ರಶಂಸಿಸಿದರು.
‘ನವೀನ್ ಬಾಬು ತುಂಬ ಚೆನ್ನಾಗಿ ಕೆಲಸ ಮಾಡಿದ್ದಾರೆ; ಅವರ ಪೂರ್ವ ಯೋಜನೆ ಅತ್ಯದ್ಭುತವಾದದ್ದು’ ಎಂದು ಮೋದಿ ಮೆಚ್ಚುಗೆಯ ಮಾತನ್ನಾಡಿದರು. ‘ಕಳೆದ ಏಳು – ಎಂಟು ದಿನಗಳಲ್ಲಿ ರಾಜ್ಯ ಸರಕಾರ ಕೇಂದ್ರದೊಂದಿಗೆ ಪೂರ್ಣ ಸಹಕಾರದೊಂದಿಗೆ ಅದ್ಭುತ ನೆರವು ಕಾರ್ಯ ಕೈಗೊಂಡಿರುವುದು ಶ್ಲಾಘನೀಯವಾಗಿದೆ’ ಎಂದು ಮೋದಿ ಹೇಳಿದರು.
‘ನಾನು ಕೂಡ ಫೋನಿ ಚಂಡಮಾರುತದ ಪ್ರಕೋಪವನ್ನು ವೈಯಕ್ತಿಕವಾಗಿ ಅವಲೋಕಿಸುತ್ತಿದ್ದೆ. ಸರಕಾರದ ಪ್ರತಿಯೊಂದು ನಿರ್ದೇಶಗಳನ್ನು ಚಾಚೂ ತಪ್ಪದೆ ಅನುಸರಿಸಿರುವ ಒಡಿಶಾದ ಜನರು ಮತ್ತು ಬೆಸ್ತರನ್ನು ನಾನು ಅಭಿನಂದಿಸುತ್ತೇನೆ’ ಎಂದು ಮೋದಿ ಹೇಳಿದರು.