ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಕೋವಿಡ್ 19 ನಿರ್ಬಂಧವನ್ನು ನವೆಂಬರ್ 30ರವರೆಗೆ ದೇಶಾದ್ಯಂತ ವಿಸ್ತರಿಸಲು ನಿರ್ಧಾರ ತೆಗೆದುಕೊಂಡಿರುವುದಾಗಿ ಗುರುವಾರ (ಅಕ್ಟೋಬರ್ 28) ಘೋಷಿಸಿದೆ.
ಇದನ್ನೂ ಓದಿ:ಗೋವಾದಲ್ಲಿ ಮಮತಾ ಬ್ಯಾನರ್ಜಿ ಚಿತ್ರಗಳಿದ್ದ ಬ್ಯಾನರ್ ಗಳ ವಿರೂಪ : ಟಿಎಂಸಿ ಕಿಡಿ
ಕೋವಿಡ್ ವಿಚಾರದಲ್ಲಿ ಐದು ವಿಚಾರಗಳನ್ನು ಕರಾರುವಕ್ಕಾಗಿ ಪಾಲಿಸಲೇಬೇಕು, ಅವುಗಳಲ್ಲಿ ಟೆಸ್ಟ್(ಪರೀಕ್ಷೆ), ಟ್ರ್ಯಾಕ್(ಹುಡುಕು) ಚಿಕಿತ್ಸೆ, ಲಸಿಕೆ ಹಾಗೂ ಕೋವಿಡ್ 19 ಮಾರ್ಗಸೂಚಿಯನ್ನು ಅನುಸರಿಸುವುದು ಮುಖ್ಯವಾಗಿದೆ ಎಂದು ತಿಳಿಸಿದೆ.
ಕಂಟೈನ್ ಮೆಂಟ್ ವಲಯಗಳಲ್ಲಿ ಜನ ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ. ಶೇ.5ರಷ್ಟು ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳಲ್ಲಿ ಮಾತ್ರ ಜನ ಸೇರಲು ಅವಕಾಶ ನೀಡಬಹುದಾಗಿದೆ. ಆದರೆ ಇದಕ್ಕೆ ಪೂರ್ವಾನುಮತಿ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮಿತಿಯನ್ನು ಹೇರುವ ಮೂಲಕ ಜನ ಸೇರಲು ಅವಕಾಶ ನೀಡಬಹುದಾಗಿದ್ದು, ಇಂತಹ ಸ್ಥಳಗಳಲ್ಲಿ ದೈಹಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ದೇಶದ ಹಲವೆಡೆ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗತೊಡಗಿದೆ. ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 16,156 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಅಲ್ಲದೇ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,42,31,809ಕ್ಕೆ ಏರಿಕೆಯಾಗಿದೆ ಎಂದು ಅಂಕಿಅಂಶ ತಿಳಿಸಿದೆ.