Advertisement

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

07:37 PM Sep 07, 2024 | Team Udayavani |

ನವದೆಹಲಿ:  ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳಿಂದ ಸುದ್ದಿಯಾಗಿದ್ದ ಮಾಜಿ ಪ್ರೊಬೆಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ಆಡಳಿತ ಸೇವೆ(IAS) ಯಿಂದ ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರ ಶನಿವಾರ (ಸೆ.7 ರಂದು) ಆದೇಶಿಸಿರುವುದಾಗಿ ವರದಿಯಾಗಿದೆ.

Advertisement

ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯದ ಕುರಿತು ನಕಲಿ ಪ್ರಮಾಣಪತ್ರ ನೀಡಿರುವ ಆರೋಪದ ಮೇಲೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಆಗಿದ್ದ ಪೂಜಾ ಖೇಡ್ಕರ್ ಅವರ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (UPSC) ಪ್ರಕರಣ ದಾಖಲಿಸಿ, ಇತ್ತೀಚೆಗೆ ಕೇಂದ್ರ ಲೋಕಸೇವಾ ಆಯೋಗ ಪೂಜಾ ಖೇಡ್ಕರ್ ಆಯ್ಕೆಯನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿತ್ತು.

ಸೆಪ್ಟೆಂಬರ್ 6 ರ ಆದೇಶದ ಪ್ರಕಾರ, ಪೂಜಾ ಖೇಡ್ಕರ್ ಅವರನ್ನು ಐಎಎಸ್ (ಪ್ರೊಬೇಷನ್) ನಿಯಮಗಳ ಪ್ರಕಾರ 1954ರ ನಿಯಮ 12ರ ಅಡಿಯಲ್ಲಿ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಈ ನಿಯಮವು ಪ್ರೊಬೇಷನರ್ ಸೇವೆಗೆ ನೇಮಕಗೊಳ್ಳಲು ಅನರ್ಹರೆಂದು ಕಂಡುಬರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಹಿಂದೆ ಪೂಜಾ ಖೇಡ್ಕರ್ ಅವರ ಮೇಲೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಭದ್ರಪಡಿಸಿಕೊಳ್ಳಲು ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗಗಳ (non-creamy layer) ಕೋಟಾಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದ ಹಿನ್ನೆಲೆ ಅವರ ಉಮೇದುವಾರಿಕೆಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC ) ರದ್ದುಗೊಳಿಸಿತ್ತು. ಆಯೋಗ ನಡೆಸುವ ಮುಂದಿನ ಎಲ್ಲಾ ಪರೀಕ್ಷೆಗಳಲ್ಲಿ ಹಾಜರಾಗುವುದನ್ನು ಶಾಶ್ವತವಾಗಿ ನಿರ್ಬಂಧಿಸಿತ್ತು.

ಪ್ರೊಬೆಷನರಿ ಅಧಿಕಾರಿ ಸುತ್ತ ಬರೀ ವಿವಾದಗಳು:

Advertisement

– ಪೂಜಾ ತಮಗೆ ದೃಷ್ಟಿದೋಷ, ಮಾನಸಿಕ ಅನಾರೋಗ್ಯ ಇರುವುದಾಗಿ ಹೇಳಿಕೊಂಡಿದ್ದರು ಮತ್ತು ನೇಮಕಾತಿಯಲ್ಲಿ ಅದರಿಂದ ಲಾಭ ಮಾಡಿಕೊಂಡಿದ್ದರು.

– ತಂದೆ ಐಎಎಸ್‌ ಅಧಿಕಾರಿಯಾಗಿದ್ದರೂ ಪೂಜಾ ಒಬಿಸಿ (ನಾನ್‌ ಕ್ರೀಮಿ ಲೇಯರ್‌) ಕೋಟಾದಡಿ ಎಂಬಿಬಿಎಸ್‌ಗೆ ಸೀಟು ಪಡೆದುಕೊಂಡಿದ್ದರು.

– ಜೂ.3ರಂದು ಪುಣೆ ಜಿಲ್ಲಾ ಸಹಾಯಕ ಕಂದಾಯ ಅಧಿಕಾರಿಯಾಗಿ ತರಬೇತಿ ಆರಂಭಿಸಿದ ಪೂಜಾ, ಅಧಿಕಾರವನ್ನು ಮೀರಿ ತಮ್ಮ ಖಾಸಗಿ ಕಾರಿಗೆ, ಕೆಂಪು-ನೀಲಿ ಬೀಕನ್‌ ಬಳಸಿದ್ದಾರೆ. ಹೆಚ್ಚುವರಿ ಕಂದಾಯ ಅಧಿಕಾರಿಯ ಒಪ್ಪಿಗೆ ಇಲ್ಲದೇ ಅವರ ಕಚೇರಿ ಸ್ವಾಧೀನಪಡಿಸಿಕೊಂಡಿದ್ದು, ಅನುಮತಿ ಇಲ್ಲದೇ ಕಚೇರಿಯ ಪೀಠೊಪಕರಣಗಳನ್ನು ಬದಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next