Advertisement

ರಾಜ್ಯಕ್ಕೆ NIA ಕಚೇರಿ : ಗೃಹ ಸಚಿವ ಅಮಿತ್‌ ಶಾ ಸಕಾರಾತ್ಮಕ ಸ್ಪಂದನೆ

01:58 AM Sep 28, 2020 | Hari Prasad |

ಹೊಸದಿಲ್ಲಿ: ಸಂಸದ ತೇಜಸ್ವಿ ಸೂರ್ಯ ಅವರು ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಿದರು.

Advertisement

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ಶಾಶ್ವತ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಕೇಂದ್ರ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ.

ಈಗಾಗಲೇ ಎನ್‌ಐಎ ಉಪ ಶಾಖೆ (ಕ್ಯಾಂಪ್‌) ಬೆಂಗಳೂರಿನಲ್ಲಿದ್ದರೂ ತನಿಖಾ ತಂಡ ಹೊರತುಪಡಿಸಿ ಸಂಪೂರ್ಣ ಆಡಳಿತ ವ್ಯವಸ್ಥೆ ಹೊಣೆಯನ್ನು ಹೈದರಾಬಾದ್‌ ಕಚೇರಿಯ ಮುಖ್ಯಸ್ಥರಿಗೆ ವಹಿಸಲಾಗಿದೆ.

ಬೆಂಗಳೂರಿನಲ್ಲಿಯೇ ಮುಖ್ಯ ಕಚೇರಿ ತೆರೆಯುವುದರಿಂದ ರಾಜ್ಯಕ್ಕೆ ಅನುಕೂಲವಾಗಲಿದೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಕೃತ್ಯಗಳನ್ನು ಮಟ್ಟಹಾಕಲು ಎನ್‌ಐಎ ಕಚೇರಿ ಬೆಂಗಳೂರಿನಲ್ಲಿ ಆರಂಭಿಸುವಂತೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

Advertisement

ಆಗಸ್ಟ್‌ನಲ್ಲಿ ಬೆಂಗಳೂರಿನ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಗಳನ್ನು ಪರಿಶೀಲಿಸಿದಾಗ ದೇಶ ವಿರೋಧಿ ಸಂಘಟನೆಗಳು ರಾಜಧಾನಿಯನ್ನು ಆಶ್ರಯ ತಾಣವಾಗಿ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರು ನಗರವನ್ನು ಉಗ್ರಗಾಮಿ, ದೇಶ ವಿರೋಧಿ ಕೃತ್ಯಗಳಿಂದ ಮುಕ್ತವಾಗಿಡುವುದಕ್ಕೆ ಎನ್‌ಐಎ ಪ್ರಾದೇಶಿಕ ಕಚೇರಿಯ ಅಗತ್ಯವಿದೆ. ದೇಶವಿರೋಧಿ ಕೃತ್ಯಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳಲು ಶಾಶ್ವತ ಕಚೇರಿ ಆರಂಭಿಸಿ ಅಗತ್ಯ ಸಿಬಂದಿ ಒದಗಿಸುವಂತೆ ತೇಜಸ್ವಿ ಸೂರ್ಯ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದರು.

ಉದ್ದೇಶ ಏನು?
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ಉಗ್ರರ ಅಡಗುದಾಣ ಎಂದೇ ಹೇಳಲಾಗುತ್ತಿತ್ತು.
ಅಲ್ಲದೆ ಬೆಂಗಳೂರಿನಲ್ಲಿ ಕೆಲವು ಉಗ್ರ ಸಂಘಟನೆಗಳ ಸದಸ್ಯರು (ಸ್ಲೀಪರ್‌ ಸೆಲ್‌) ಸಕ್ರಿಯರಾಗಿದ್ದಾರೆ ಎಂಬುದು ಹಲವು ತನಿಖಾ ಸಂಸ್ಥೆಗಳಿಂದ ಬಯಲಾಗಿದೆ. ಆದರೂ ಶಂಕಿತರ ವಿರುದ್ಧ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಈ ಹಿಂದಿನ ಕೆಲವು ಗಲಭೆ, ದೊಂಬಿ ಪ್ರಕರಣಗಳಲ್ಲಿ ಶಂಕಿತ ಉಗ್ರರ ಕೈವಾಡ ಇರುವುದು ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರತ್ಯೇಕ ಎನ್‌ಐಎ ಕಚೇರಿ ತೆರೆಯಬೇಕೆಂಬ ಕೂಗು ಇತ್ತು. ಬೆಂಗಳೂರಿನ ಎನ್‌ಐಎ ಕಚೇರಿಯಲ್ಲಿ ಸಂಪನ್ಮೂಲ ಕೊರತೆ ಇದೆ. ಹೀಗಾಗಿ ಎಲ್ಲ ಕಾರ್ಯಾಚರಣೆಗಳು ದಿಲ್ಲಿ, ಹೈದರಾಬಾದ್‌, ಚೆನ್ನೈ ಕಚೇರಿಗಳ ಮೂಲಕವೇ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next