ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಸೂಕ್ತ ಜಾಗ ಕಲ್ಪಿಸುವುದಾಗಿ ಹೇಳಿದೆ.
ಮನಮೋಹನ್ ಅವರ ಅಂತ್ಯ ಸಂಸ್ಕಾರ ನಡೆಸಿದ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್ ಬೇಡಿಕೆ ಸಲ್ಲಿಸಿತ್ತು. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರ ಜೊತೆಗೂ ಮಾತನಾಡಿದ್ದರು. ಇದರ ಬೆನ್ನಲ್ಲೇ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇದೇ ವೇಳೆ, ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಜಾಗ ಸಿಗುತ್ತಿಲ್ಲವೇ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಪ್ರಶ್ನಿಸಿದ್ದರ ಕುರಿತು ಕಿಡಿಕಾರಿರುವ ಬಿಜೆಪಿ, “ಸಿಂಗ್ ಸಾವಿನ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಕೊಳಕು ರಾಜಕೀಯವನ್ನು ನಿಲ್ಲಿಸಬೇಕು. ಮಾಜಿ ಪ್ರಧಾನಿ ನರಸಿಂಹರಾವ್ ನಿಧನದ ಬಳಿಕ ಅವರನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ಕಾಂಗ್ರೆಸ್ ಮರೆಯಬಾರದು’ ಎಂದಿದೆ.
ನನ್ನ ತಂದೆಗೆ ಕಾಂಗ್ರೆಸ್ ಸಂತಾಪವನ್ನೂ ಸೂಚಿಸಿಲ್ಲ: ಪ್ರಣಬ್ ಮಗಳು ಕಿಡಿ
ನವದೆಹಲಿ: ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಮನವಿ ಮಾಡಿದ ಕಾಂಗ್ರೆಸ್ ವಿರುದ್ಧ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠಾ ಮುಖರ್ಜಿ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ “2020ರಲ್ಲಿ ನನ್ನ ತಂದೆ ನಿಧನರಾದಾಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲೂéಸಿ) ಸಂತಾಪ ಸಭೆಯನ್ನೂ ನಡೆಸಲಿಲ್ಲ. ಜತೆಗೆ ರಾಷ್ಟ್ರಪತಿ ನಿಧನರಾದಾಗ ಈ ರೀತಿ ಸಭೆ ನಡೆಸುವ ಪ್ರವೃತ್ತಿ ಇಲ್ಲ ಎಂದು ನಾಯಕ ರೊಬ್ಬರು ತಿಳಿಸಿದ್ದರು. ಆದರೆ, ಬಳಿಕ ನನ್ನ ತಂದೆಯ ಡೈರಿ ನೋಡಿದಾಗ ತಿಳಿಯಿತು ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣ್ ನಿಧನರಾದಾಗ ಸಿಡಬ್ಲೂéಸಿ ಸಂತಾಪ ಸಭೆ ನಡೆಸಿತ್ತು’ ಎಂದು ಬರೆದಿದ್ದಾರೆ.