Advertisement

ಕೇಂದ್ರದ್ದು ಮಾರ್ಕೆಟಿಂಗ್‌ ಸರ್ಕಾರ

11:52 AM Jul 26, 2017 | |

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಮಾರ್ಕೇಟಿಂಗ್‌ ಕೆಲಸ ಮಾಡುತ್ತಿದೆಯೇ ಹೊರತು, ಯಾವುದೇ ಜನಪರ ಕೆಲಸ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. 

Advertisement

ಮಂಗಳವಾರ ಬಿಬಿಎಂಪಿ ವತಿಯಿಂದ ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ಕಲ್ಯಾಣ ಕಾರ್ಯಕ್ರಮದಡಿ ಸವಲತ್ತುಗಳ ವಿತರಣೆ ಮಾಡಿ ಮಾತನಾಡಿದ ಅವರು, “ನರೇಂದ್ರ ಮೋದಿಯವರ ಸರ್ಕಾರ ಈವರೆಗೆ ಯಾವುದೇ ಜನಪರ ಕೆಲಸ ಮಾಡಿಲ್ಲ.

ಅವರದು ಬಾಯಿ ಬಡಾಯಿ, ಅಭಿವೃದ್ಧಿ ಶೂನ್ಯ ಸರ್ಕಾರ. ಬಿಜೆಪಿಯವರು ಕೆಲಸ ಮಾಡದಿದ್ದರೂ ಮಾರ್ಕೇಟಿಂಗ್‌ ಮಾಡುವುದರಲ್ಲಿ ನಿಸ್ಸೀಮರು. ಆದರೆ, ನಾವು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡುತ್ತಿವೆ. ನಮಗೆ ಮಾರ್ಕೆಟಿಂಗ್‌ ಮಾಡಲು ಬರುವುದಿಲ್ಲ,’ ಎಂದರು. 

“ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಪ್ರತಿಯೊಬ್ಬರಿಗೂ ಜನ್‌ ಧನ್‌ ಖಾತೆ ಮಾಡಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಜನ್‌ ಧನ್‌ ಖಾತೆ ಮಾಡಿಸಿದರಿಂದ ಯಾರಾದರೂ ಹಸಿವು ಮುಕ್ತರಾಗಿದ್ದಾರೆಯೇ. ಯಾರ ಹೊಟ್ಟೆಯೂ ತುಂಬದಿದ್ದಾಗ ಜನ್‌ ಧನ್‌ ಖಾತೆ ಮಾಡಿದ್ದರಿಂದ ಆದ ಉಪಯೋಗವೇನು? ಎಂದು ಪ್ರಶ್ನಿಸಿದರು. 

ಮೋದಿಯವರು ತಮ್ಮ ಭಾಷಣಗಳಲ್ಲಿ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ತಿಳಿಸಿದ್ದರು. ಮೂರು ವರ್ಷಳಾಗುತ್ತಾ ಬಂತು, ಯಾರ ಖಾತೆಗಾದರೂ 15 ರೂಪಾಯಿ ಹಾಕಿದ್ದಾರೆಯೇ ಎಂದು ವ್ಯಂಗ್ಯವಾಡಿದ ಮುಖ್ಯಮಂತ್ರಿಗಳು, ಇಂತಹ ಬೆರಗು ಮಾತುಗಳಿಗೆ ಜನರು ಮಾರು ಹೋಗಬಾರದು ಎಂದು ಹೇಳಿದರು. 

Advertisement

ಬಿಎಸ್‌ವೈ ಮಾಡಿದ್ದೇನು?: ಬಿಜೆಪಿ ನಡಿಗೆ ಸ್ಲಂಗಳ ಕಡೆಗೆ ಎಂದು ಹೋಟೆಲ್‌ನಿಂದ ಊಟ ತರಿಸಿಕೊಳ್ಳುವ ಯುಡಿಯೂರಪ್ಪ ಅವರು, ಅಧಿಕಾರದಲ್ಲಿದ್ದಾಗ ದಲಿತರಿಗೆ ಏನು ಮಾಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಹೀಗಾಗಿ ಇಂತಹ ನಾಟಕಗಳನ್ನು ಅವರು ನಂಬುವುದಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಜನಸಂಖ್ಯೆ ಆಧಾರದಲ್ಲಿ ಶೇ.24.1ರಂತೆ ಹಿಂದುಳಿದ ವರ್ಗಗಳಿಗೆ 27,704 ಕೋಟಿ ರೂ. ಅನುದಾನ ನೀಡಿದೆ.

ಅಲ್ಪಸಖ್ಯಾಂತರಿಗೆ 2750 ಕೊಟಿ ರೂ. ನೀಡಲಾಗಿದೆ. ಆದರೆ, ಅದಕ್ಕೆ ವಿರೋಧ ಪಕ್ಷ ನಾಯಕರು ಅಲ್ಪಸಂಖ್ಯಾತರ ಓಲೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ. ಅವರೂ ಈ ದೇಶದ ಪ್ರಜೆಗಳು ಅವರನ್ನು ರಕ್ಷಣೆ ಮಾಡುವ ಕರ್ತವ್ಯ ಸರ್ಕಾರದ್ದು ಎಂದು ಹೇಳುವ ಮೂಲಕ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. 

ಸಂಸತ್ತಿಗೆ ಮುತ್ತಿಗೆ ಹಾಕಲಿ: ರಾಜ್ಯ ರೈತರ ಸಾಲ ಮನ್ನಾ ಮಾಡದೆ ಹೋದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದರು. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಈಗ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡುವುದು ಬಾಕಿಯಿದ್ದು, ಈಗ ಹೋಗಿ ಸಂಸತ್ತಿಗೆ ಮುತ್ತಿಗೆ ಹಾಕಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. 

ಜೆಡಿಎಸ್‌ಗೆ ಸಿದ್ದಾಂತವಿಲ್ಲ: ಜೆಡಿಎಸ್‌ಗೆ ಯಾವುದೇ ಸಿದ್ಧಾಂತವಿಲ್ಲ. ಅವರಿಗೆ ಎಲ್ಲಿ ಅಧಿಕಾರ ಸಿಗುತ್ತದೆಯೋ ಅವರಿಗೆ ಬೆಂಬಲ ನೀಡುತ್ತಾರೆ. ಒಂದು ವೇಳೆ ನೀವು ಜೆಡಿಎಸ್‌ಗೆ ಬೆಂಬಲ ನೀಡಿದರೆ, ಪರೋಕ್ಷವಾಗಿ ಕೋಮುವಾದಿಗಳಿಗೆ ಬೆಂಬಲ ನೀಡಿದಂತೆ. ಜೆಡಿಎಸ್‌ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದ ಸಿದ್ದರಾಮಯ್ಯ, ಬಿಜೆಪಿಯವರು ಕತ್ತರಿ ಇದ್ದಂತೆ ಅವರು ಸಮಾಜವನ್ನು ಕತ್ತರಿಸುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್‌ನವರು ಸೂಜಿ ಇದ್ದಂತೆ ಕತ್ತರಿಸಿದ ಸಮಾಜವನ್ನು ಹೊಲಿಗೆ ಹಾಕಿ ಒಂದು ಮಾಡುವ ಕೆಲಸ ಮಾಡುತ್ತೇ ಎಂದರು. 

ಬರದಿಂದ ತತ್ತರಿಸಿದ್ದ ರಾಜ್ಯದ ರೈತರ ಸಹಕಾರ ಬ್ಯಾಂಕ್‌ಗಳಲ್ಲಿನ ಸಾಲವನ್ನು ನಮ್ಮ ಸರ್ಕಾರ ಮನ್ನಾ ಮಾಡಿದೆ. ರಾಷ್ಟ್ರೀಯ ಬ್ಯಾಂಕ್‌ಗಳ ರೈತರ ಸಾಲವನ್ನು ಮನ್ನಾ ಮಾಡಿಸಲು ಬಿಜೆಪಿ ನಾಯಕರು ಮುಂದಾಗಬೇಕು. 
-ಕೆ.ಜೆ.ಜಾರ್ಜ್‌, ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next