ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಸಣ್ಣ ರೈತರಿಗೆ ಸಹಾಯಕವಾಗಿ ವಾರ್ಷಿಕವಾಗಿ ನೀಡುತ್ತಿರುವ ನೇರ ನಗದು ಸಬ್ಸಿಡಿ(ಕಿಸಾನ್ ಸಮ್ಮಾನ್ ನಿಧಿ)ಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಪ್ರಸ್ತುತ ಕೇಂದ್ರ ಸರ್ಕಾರವು ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಯಾಗಿ ವಾರ್ಷಿಕ 6,000 ರೂ. ನೀಡುತ್ತಿದೆ. ಈ ಮೊತ್ತವನ್ನು 8,000 ರೂ.ಗಳಿಗೆ ಏರಿಕೆ ಮಾಡಲು ಸರ್ಕಾರ ಯೋಜಿಸುತ್ತಿದೆ.
ಇದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದರೆ, ಸರ್ಕಾರಕ್ಕೆ ಹೆಚ್ಚುವರಿಯಾಗಿ 20,000 ಕೋಟಿ ರೂ. ವೆಚ್ಚವಾಗಲಿದೆ. ಪ್ರಸ್ತುತ ಬಜೆಟ್‌ನಲ್ಲಿ ಸರ್ಕಾರವು ಈ ಯೋಜನೆಗಾಗಿ 60,000 ಕೋಟಿ ರೂ. ಮೀಸಲಿಟ್ಟಿದೆ.
ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಗ್ರಾಮೀಣ ಭಾಗದವರು ಶೇ.65ರಷ್ಟು ಇದ್ದಾರೆ. ಈ ಹಿನ್ನೆಲೆಯಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲು ಮುಂದಾಗಿರುವ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ರೈತರ ಮತಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿರುವುದು ಸಹಜವಾಗಿದೆ.
2018ರ ಡಿಸೆಂಬರ್‌ನಲ್ಲಿ ರೈತರಿಗೆ ಸಬ್ಸಿಡಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. ಸದ್ಯ 11 ಕೋಟಿ ಸಣ್ಣ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯ ನಿಯಮಗಳನ್ನು ಸಡಿಲಿಸುವ ನಿಟ್ಟಿನಲ್ಲೂ ಸರ್ಕಾರದ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಿದೆ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ರೈತರಿಗೆ ಈ ಯೋಜನೆಯ ಉಪಯೋಗ ಸಿಗಲಿದೆ.
ಕಳೆದ ವಾರ, ಉಜ್ವಲ ಯೋಜನೆಯಡಿ ಅನಿಲ ಸಿಲಿಂಡರ್‌ಗಳಿಗೆ ಸಬ್ಸಿಡಿಯನ್ನು 100ರೂ. ಹೆಚ್ಚಿಸಿತು. ಇದರಿಂದ ಈ ಹಿಂದೆ 200 ರೂ. ಇದ್ದ ಸಬ್ಸಿಡಿ, ಇದೀಗ 300 ರೂ.ಗೆ ಏರಿಕೆಯಾಗಿದೆ.