ಬೆಳಗಾವಿ: ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಪರಿಶೀಲನೆಗೆ ಕೇಂದ್ರದಿಂದ ಮತ್ತೊಂದು ತಂಡ ಬರಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಜಂಟಿಕಾರ್ಯದರ್ಶಿ ಶ್ರೀಪ್ರಕಾಶ್ ಹೇಳಿದರು.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸರ್ಕಾರದ ವರದಿ ಪ್ರಕಾರ, ರಾಜ್ಯದ 6 ಜಿಲ್ಲೆಗಳಲ್ಲಿ ಪ್ರವಾಹ ನಂತರದ ಪರಿಸ್ಥಿತಿ ಗಂಭೀರವಾಗಿದೆ. ಬೆಳಗಾವಿ ಜಿಲ್ಲೆಯೂ ಅದರಲ್ಲೊಂದು. ಇಲ್ಲಿ ಕಬ್ಬಿನ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ನಾವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಪ್ರಮಾಣ ಪರಿಶೀಲಿಸುತ್ತಿದ್ದೇವೆ.
ಪ್ರವಾಹದಿಂದ ಆಗಿರುವ ಹಾನಿಯ ಪರಿಹಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮನವಿ ಸಲ್ಲಿಸುವ ನಿರೀಕ್ಷೆ ಇದೆ. ಅದನ್ನು ಆಧರಿಸಿ ಕೇಂದ್ರದಿಂದ ಮತ್ತೊಂದು ತಂಡ ಪರಿಶೀಲನೆಗೆ ಬರಲಿದೆ ಎಂದು ಸ್ಪಷ್ಟಪಡಿಸಿದರು.
ಪ್ರವಾಹ ಪರಿಸ್ಥಿತಿಯಿಂದ ಆರು ಜಿಲ್ಲೆಗಳು ಬೇಗ ಹೊರಬರುವುದು ಕಷ್ಟ. ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ಒದಗಿಸಲು ಸಮಯಾವಕಾಶ ಬೇಕಾಗಲಿದೆ. ಸಂತ್ರಸ್ತರಿಗೆ ಆದ್ಯತೆ ಮೇರೆಗೆ ಪರಿಹಾರ ವಿತರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.
ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ, ಸ್ಥಳಾಂತರ ಹಾಗೂ ಪುನರ್ವಸತಿ ವಿಚಾರದಲ್ಲಿ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ ಎಂದು ತಿಳಿಸಿದರು.