Advertisement
ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂಬ ಆರೋಪ ಇದುವರೆಗೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರದಿಂದ ಬರುತ್ತಿತ್ತು. ಈಗ ರಾಜ್ಯ ಸರಕಾರದ ವಿರುದ್ಧ ಕೇಂದ್ರ ಸರಕಾರ ತಿರುಗಿ ಬಿದ್ದಿದ್ದು, ಕೇಂದ್ರದ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ದೂರಿದೆ. ಕೇಂದ್ರ ಸರಕಾರದ ಉಜಾಲ (ಎಲ್‌ಇಡಿ ಬಲ್ಬ್ ವಿತರಣೆ), ಉಜ್ವಲ (ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ), ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭಿಮಾ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಸಕ್ತಿ ವಹಿಸುತ್ತಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿರುವ ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್, ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ರಾಜ್ಯ ಸರಕಾರದ ಬದಲಿಗೆ ಕೇಂದ್ರ ಸರಕಾರವೇ ತನ್ನ ಯೋಜನೆಗಳನ್ನು ನೇರ ಜನತೆಗೆ ತಲುಪಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆದರೆ, ಸಾಕಷ್ಟು ಎಲ್‌ಇಡಿ ಬಲ್ಬ್ ಕೊಡುತ್ತೇವೆ ಎಂದು ಹೇಳಿದ್ದರೂ ಕರ್ನಾಟಕ ಕೇವಲ 1.58 ಕೋಟಿ ಮಾತ್ರ ವಿತರಣೆ ಮಾಡಿದೆ. ಅಲ್ಲದೆ, ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಉಜ್ವಲ (ಎಲ್‌ಪಿಜಿ ವಿತರಣೆ) ಯೋಜನೆಯನ್ನು ರಾಜ್ಯ ಸರಕಾರ ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಜತೆಗೆ ರಾಜ್ಯದಲ್ಲಿ ಬರ ಇದ್ದರೂ ರೈತರಿಗೆ ಅನುಕೂಲವಾಗುವ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಮಣ್ಣು ಆರೋಗ್ಯ ಕಾರ್ಡ್ ವಿತರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಕರ್ನಾಟಕಕ್ಕೆ ಕಳೆದ ಮೂರು ವರ್ಷದಲ್ಲಿ ಕೇಂದ್ರ ಅತೀ ಹೆಚ್ಚಿನ ಅನುದಾನ ನೀಡಿದೆ. ಕೇಂದ್ರದಲ್ಲಿ ಯುಪಿಎ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಲೂ ಇಷ್ಟು ಪ್ರಮಾಣದ ಅನುದಾನ ಕರ್ನಾಟಕ ಪಡೆದಿಲ್ಲ. ಅನುದಾನ ಹಂಚಿಕೆಯಲ್ಲೂ ಕೇಂದ್ರ ಯಾವುದೇ ರೀತಿಯ ತಾರತಮ್ಯ ಮಾಡುತ್ತಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.
ಪ್ರೀಮಿಯಂನಲ್ಲಿ ಕೇಂದ್ರ-ರಾಜ್ಯದ ಸಮಪಾಲುಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ವಿಮಾ ಕಂಪೆನಿ ನಿಗದಿಪಡಿಸಿದ ಪ್ರೀಮಿಯಂನ ಸ್ವಲ್ಪ ಮೊತ್ತವನ್ನು ರೈತರು ಭರಿಸುತ್ತಾರೆ. ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮನಾಗಿ ಭರಿಸುತ್ತವೆ. ಹೀಗಾಗಿ ಕೇಂದ್ರ ಸರಕಾರವೇ ಪೂರ್ಣ ಪ್ರಮಾಣದಲ್ಲಿ ಯಾವ ರೀತಿ ಈ ಯೋಜನೆ ಜಾರಿಗೊಳಿಸಲು ಸಾಧ್ಯ? ಈ ಯೋಜನೆ ಬಗ್ಗೆ ರೈತರಲ್ಲಿ ಅರಿವು ಮೂಡಿಸುವಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಆಗಿದ್ದೇನೋ ನಿಜ. ಆದರೆ, ಈ ವರ್ಷದಿಂದ ಫಸಲ್ ಭಿಮಾ ಯೋಜನೆಯಡಿ ವಿಮೆ ಮಾಡಿಸಿದವರ ಸಂಖ್ಯೆ ದುಪ್ಪಟ್ಟಾಗಿದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.